ತಮಿಳುನಾಡಿನಲ್ಲಿ ಯಾರು ಬೇಕಾದರೂ ಶಾಲೆ ತೆರೆಯಬಹುದು, ಒಬ್ಬ ’ಬಡಗಿ’ ಕೂಡ ಯಾವುದೇ ಅಧಿಕೃತ ಪರವಾನಗಿ ಇಲ್ಲದೆಯೇ ಶಾಲೆ ತೆರೆಯಬಹುದು" ಎಂದು ತಮಿಳುನಾಡು ಪ್ರೌಢಶಾಲೆಗಳ ನಿರ್ದೇಶಕರಾದ ಕೆ. ದೇವರಾಜನ್ ಹೇಳಿರುವುದಾಗಿ ವರದಿಯಾಗಿದೆ. ಬಹುಶಃ ಇದು ಬಾಯಿ ತಪ್ಪಿ ಬಂದ ಮಾತಾಗಿರಬಹುದು. ಆದರೆ ಮಾಧ್ಯಮಗಳು ಈ ಒಂದು ಎಡವಟ್ಟು ಮಾತನ್ನೇ ಎತ್ತಿಕೊಂಡು ದೊಡ್ಡದು ಮಾಡಬಹುದೆಂದು ಅವರು ಅಂದುಕೊಂಡಿರಲಿಕ್ಕಿಲ್ಲ. ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಈಚೆಗೆ ಚೆನ್ನೈಯಲ್ಲಿ ಏರ್ಪಡಿಸಿದ್ದ ‘ಪಬ್ಲಿಕ್ ಹಿಯರಿಂಗ್’ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು. "ತಮಿಳುನಾಡಿನಲ್ಲಿ ಶಾಲಾ ಶಿಕ್ಷಣದ ವಿಚಾರದಲ್ಲಿ ದೇವರಾಜನ್ ಹೇಳಿರುವ ಮಾತು ಪೂರ್ತಿ ಸತ್ಯ. ಒಂದಿಷ್ಟು ಭೂಮಿ, ಕೆಲವು ಕುರ್ಚಿಗಳು ಹಾಗೂ ಒಂದಷ್ಟು ಹಣ ಇಟ್ಟುಕೊಂಡಿರುವ ಯಾರು ಬೇಕಾದರೂ ಇಲ್ಲಿ ಹೈಸ್ಕೂಲನ್ನು ಆರಂಭಿಸಬಹುದು. ಸರ್ಕಾರದ ಅಂಗೀಕಾರ ಪಡೆಯುವುದೆನ್ನುವುದು ಕೇವಲ ಔಪಚಾರಿಕವಾದುದು ಹಾಗೂ ಅದಕ್ಕೆ ಒಂದಷ್ಟು ಸಮಯ ಹಿಡಿಸುತ್ತದೆ ಅಷ್ಟೇ. ತಮಿಳುನಾಡಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಭಾರೀ ಬೇಡಿಕೆಯಿದೆ. ರಾಜ್ಯದಲ್ಲಿ ಇಂದು ೪೦೦೦ಕ್ಕೂ ಹೆಚ್ಚು ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ ಸುಮಾರು ೧೦೦೦ ಶಾಲೆಗಳು ಅನೇಕ ವರ್ಷಗಳಿಂದ ಮಾನ್ಯತೆಗಾಗಿ ಕಾಯುತ್ತಿವೆ; ಆದರೂ ನಿಂತಿಲ್ಲ, ನಡೆಯುತ್ತಿವೆ. ಅವುಗಳ ಬಗ್ಗೆ ಯಾವುದೇ ಮೇಲ್ವಿಚಾರಣೆ ಇಲ್ಲದಿರುವುದರಿಂದ ಅವುಗಳ ಗುಣಮಟ್ಟ ತೀರಾ ಶೋಚನೀಯವಾಗಿದೆ" ಎನ್ನುತ್ತಾರೆ ’ಸ್ಟೇಟ್ ಪ್ಲಾಟ್ಫಾರ್ಮ್ ಫಾರ್ ಕಾಮನ್ ಸ್ಕೂಲ್ ಸಿಸ್ಟಂ’ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಿನ್ಸ್ ಗಜೇಂದ್ರ ಬಾಬು.ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕುಂಭಕೋಣಂನಲ್ಲಿ ಇಂತಹ ಶಾಲೆಯೊಂದರಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ೯೬ ಚಿಕ್ಕ ಮಕ್ಕಳು ಅಸುನೀಗಿದ್ದು ತಮಿಳುನಾಡಿನ ಖಾಸಗಿ ಶಾಲೆಗಳ ದುಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕುಂಭಕೋಣದ ದುರ್ಘಟನೆಯಿಂದಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತಂತೆ ಕಂಡ ರಾಜ್ಯ ಸರ್ಕಾರ ಸಮರ್ಪಕ ಮೂಲಸೌಕರ್ಯಗಳಿಲ್ಲದೇ ತಲೆಯೆತ್ತುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ಮುಂದಾದಂತೆ ಕಂಡಿತು. ಹಾಗೆ ಕಂಡಿದ್ದಷ್ಟೆ ಹೊರತು ಅಂತಹ ಶಾಲೆಗಳು ತಲೆಯೆತ್ತುವುದನ್ನು ತಡೆಯುವುದಕ್ಕೇನೂ ಅದರಿಂದ ಸಾಧ್ಯವಾಗಲಿಲ್ಲ. ಮದರಾಸು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳಾದ ಹಿರಿಯ ಶಿಕ್ಷಣ ತಜ್ಞೆ ಡಾ. ವಾಸಂತಿ ದೇವಿಯವರು ತಮಿಳುನಾಡಿನ ಶೇ. ೭೫ರಷ್ಟು ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಲು ಅಯೋಗ್ಯವಾಗಿವೆ ಎನ್ನುತ್ತಾರೆ. "ಶಿಕ್ಷಣದ ಹಕ್ಕಿನ ಕಾಯ್ದೆಯಲ್ಲಿ ನೀಡಲಾಗಿರುವ ಮಾರ್ಗಸೂಚಿಗಳಂತೆ ಎಲ್ಲಾ ಶಾಲೆಗಳ ಬೋಧಕ ಸಿಬ್ಬಂದಿಯ ಶೈಕ್ಷಣಿಕ ಗುಣಮಟ್ಟ ಹಾಗೂ ಶಾಲೆಗಳ ಮೂಲಸೌಕರ್ಯಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದ್ದೇ ಆದಲ್ಲಿ ರಾಜ್ಯದ ಶೇ. ೭೫ರಷ್ಟು ಶಾಲೆಗಳು ಮುಚ್ಚಲು ಯೋಗ್ಯವಾಗಿವೆ. ಇಲ್ಲಿನ ಅನೇಕ ಖಾಸಗಿ ಶಾಲೆಗಳು ಗೂಡಂಗಡಿಗಳಂತಿವೆ. ಅವುಗಳಲ್ಲಿ ಆಟದ ಮೈದಾನಗಳು ಕೂಡ ಇಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ಖಾಸಗಿ ಶಾಲೆಗಳನ್ನು ಮನಸೋ ಇಚ್ಛೆ ತೆರೆಯಲಾಗಿದೆ. ಅವು ಮಾನ್ಯತೆಗಾಗಿ ಕೋರಿಕೆ ಸಲ್ಲಿಸಿದರೆ ಮಾತ್ರ ಸರ್ಕಾರ ಕೊಡುತ್ತದೆ. ಇಲ್ಲದಿದ್ದರೆ ಅವು ಮಾನ್ಯತೆಯಿಲ್ಲದೆಯೇ ಎಷ್ಟು ಕಾಲ ಬೇಕಾದರೂ ಕಾರ್ಯ ನಿರ್ವಹಿಸಬಹುದು. ಅವುಗಳಲ್ಲಿನ ಮೂಲಸೌಕರ್ಯಗಳು ಎಷ್ಟು ಕಳಪೆ ದರ್ಜೆಯಲ್ಲಿವೆಯೆಂದರೆ, ಕುಂಭಕೋಣಂನಲ್ಲಿ ನಡೆದಂತಹ ದುರಂತ ಭವಿಷ್ಯದಲ್ಲಿ ಮತ್ತೆ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲವೆಂದೇ ನನಗೆ ತೋರುತ್ತದೆ" ಎಂದು ಡಾ. ವಾಸಂತಿ ದೇವಿ ದುಃಖ ವ್ಯಕ್ತಪಡಿಸುತ್ತಾರೆ.ಈಚೆಗೆ ಖಾಸಗಿ ಶಾಲೆಯೊಂದರ ಶಾಲಾ ವಾಹನ ಕೆರೆಯೊಂದಕ್ಕೆ ಬಿದ್ದು ಒಂಬತ್ತು ಹಸುಳೆಗಳು ಮರಣ ಹೊಂದಿದ ಪ್ರಕರಣ ಮೇಲೆ ಹೇಳಿದ ಪಬ್ಲಿಕ್ ಹಿಯರಿಂಗ್ನಲ್ಲಿ ಉಲ್ಲೇಖಗೊಂಡಿತು. ಆ ಶಾಲೆಯೀಗ ಹೆಸರು ಬದಲಾಯಿಸಿಕೊಂಡು ಪುನಃ ಕಾರ್ಯ ನಿರ್ವಹಿಸುತ್ತಿದೆ, ಅದೂ ಸರ್ಕಾರಿ ಮಾನ್ಯತೆಯಿಲ್ಲದೆಯೇ.ದೇವರಾಜನ್ ಅವರನ್ನು ಟಿಎಸ್ಐ ಭೇಟಿ ಮಾಡಿ ಅವರ ಹೇಳಿಕೆಯ ಬಗ್ಗೆ ವಿವರಣೆ ಕೇಳಿದಾಗ, ಮಾಧ್ಯಮಗಳು ತಮ್ಮ ಮಾತನ್ನು ಅಪಾರ್ಥ ಮಾಡಿಕೊಂಡಿವೆ ಎಂದರು. "ಅಸ್ತಿತ್ವದಲ್ಲಿರುವ ಕಾಯ್ದೆಯಂತೆ ಯಾರೇ ಆಗಲಿ ಅಗತ್ಯವಿರುವ ಭೂಮಿ, ಮೂಲಸೌಕರ್ಯಗಳು ಹಾಗೂ ಶಿಕ್ಷಣ ಇಲಾಖೆಯ ಪರವಾನಗಿಗಳಿದ್ದರೇನೇ ಶಾಲೆಯೊಂದನ್ನು ಆರಂಭಿಸಲು ಸಾಧ್ಯ. ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಮಾತ್ರ ಇದರಿಂದ ವಿನಾಯ್ತಿ ನೀಡಲಾಗಿದೆ. ಆದರೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ತಮಿಳುನಾಡಿನಂತಹ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಅತಿಯಾದ ಬೇಡಿಕೆಯಿದೆ. ಖಾಸಗಿ ಶಿಕ್ಷಣ ಸಂಸ್ಥೆಯೊಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೆ ಸಹಜವಾಗಿಯೇ ಹೆಚ್ಚುಹೆಚ್ಚು ಮಕ್ಕಳು ಅಲ್ಲಿಗೆ ಸೇರುತ್ತಾರೆ. ಶಾಲೆ ತೆರೆದವರು ಆ ಬಳಿಕ ಮಾನ್ಯತೆ ಕೇಳಿ ನಮ್ಮ ಬಳಿಗೆ ಬಂದಾಗ, ಸಮಗ್ರವಾದ ಪ್ರತ್ಯಕ್ಷ ಪರಿಶೀಲನೆಯ ನಂತರವೇ ಮಾನ್ಯತೆ ನೀಡಲಾಗುತ್ತಿದೆ" ಎಂದು ಅವರು ಹೇಳುತ್ತಾರೆ. ಎನ್ಸಿಪಿಸಿಆರ್ನ ಪಬ್ಲಿಕ್ ಹಿಯರಿಂಗ್ನಲ್ಲಿ ತಮಿಳುನಾಡಿನ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಯ ಕುರಿತು ತೀವ್ರವಾದ ಟೀಕೆ ವ್ಯಕ್ತವಾಗಿತ್ತು.ತಮಿಳುನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಶಿಕ್ಷಣ ಒಂದು ವಿವಾದಗ್ರಸ್ತ ವಿಚಾರವಾಗಿದೆ. ಸಮಾನ ಶಿಕ್ಷಣ ಕಾಯ್ದೆ ಹಾಗೂ ಖಾಸಗಿ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದ ನಿಯಮಗಳು ಬಹುಮುಖ್ಯ ವಿಚಾರಗಳಾಗಿವೆ. ಸಮಾನ ಶಿಕ್ಷಣ ಕಾಯ್ದೆಯನ್ವಯ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ವಿಭಿನ್ನ ಜ್ಞಾನ ಶಿಸ್ತುಗಳನ್ನು ಬೋಧಿಸುವ ಎಲ್ಲಾ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ಪಠ್ಯಕ್ರಮವನ್ನು ರೂಪಿಸಿತು. ಆದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ದೀರ್ಘಕಾಲದ ಕಾನೂನು ಸಮರದ ಬಳಿಕ ಇದೀಗ ಈ ವಿಚಾರ ಬಗೆಹರಿದಿದೆ.ಆದರೆ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದ ವಿಚಾರ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿವೃತ್ತ ನ್ಯಾಯಾಧೀಶ ಗೋವಿಂದರಾಜನ್ ಅಧ್ಯಕ್ಷತೆಯಲ್ಲಿ ಇದಕ್ಕಾಗಿ ಆಯೋಗವೊಂದನ್ನು ರಚಿಸಲಾಗಿತ್ತು. ಅವರು ಮೊದಲಿಗೆ ಪ್ರೌಢಶಾಲೆಗಳ ಶುಲ್ಕವನ್ನು ನಿರ್ಧರಿಸಿ ವರದಿ ನೀಡಿದರು. ಅದರ ವಿರುದ್ಧ ಪ್ರೌಢಶಾಲೆಗಳ ಅಸೋಸಿಯೇಶನ್ನು ಕೋರ್ಟಿಗೆ ಹೋಗಿದೆ. ಇತ್ತ ಆ ನ್ಯಾಯಾಧೀಶರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದಾರೆ. ಈಗ ಮತ್ತೊಬ್ಬ ನಿವೃತ್ತ ನ್ಯಾಯಾಧೀಶ ರವಿರಾಜ ಪಾಂಡ್ಯನ್ ಅವರಿಗೆ ಆಯೋಗದ ಅಧ್ಯಕ್ಷತೆ ವಹಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಚಟುವಟಿಕೆ-ಆಧಾರಿತ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಶಹಭಾಸ್ಗಿರಿ ಗಳಿಸಿದೆ. ಆದರೆ ಇತರ ಹಲವು ವಿಚಾರಗಳಲ್ಲಿ ಸಾಧಿಸಬೇಕಾದ್ದು ಬಹಳವಿದೆ. ಬಹುಶಃ ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯೊಳಗೆ ಸೇರಿಕೊಂಡಿರುವ ಅಸಂಗತಗಳನ್ನು ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಇಂತಹ ಅನೇಕ ಪಬ್ಲಿಕ್ ಹಿಯರಿಂಗ್ಗಳು ಬೇಕೇನೋ?

No comments:
Post a Comment