Saturday, 29 September 2012

ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಆತಂಕ!

ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ, ಇದು ರಾಜ್ಯವ್ಯಾಪಿ ಸಮಸ್ಯೆಯಾಗಿದೆ. ಒಟ್ಟಾರೆ ೮೯೯ ವೈದ್ಯರ ಕೊರತೆ ಇದೆ. ಗಂಟೆಗಳ ಲೆಕ್ಕದಲ್ಲಿ ವೇತನ ಅಥವಾ ಒಬ್ಬ ರೋಗಿಗೆ ಇಂತಿಷ್ಟು ಲೆಕ್ಕದಲ್ಲಿ ವೇತನ ನೀಡಲು ಸರ್ಕಾರ ಸಿದ್ಧವಿದ್ದರೂ ಸಹ ತಜ್ಞ ವೈದ್ಯರು ಸರ್ಕಾರಿ ಸೇವೆಗೆ ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ನಿವಾರಣೆಗೆ ಸರ್ಕಾರ ಗ್ರಾಮೀಣ ಭಾಗದಲ್ಲಿ ಕಡ್ಡಾಯ ಸೇವೆ ಕಾನೂನು ಜಾರಿಗೆ ತಂದಿದೆ. ಸೆಪ್ಟಂಬರ್ನಲ್ಲಿ ತಜ್ಞ ವೈದ್ಯರ ತಂಡ ತರಬೇತಿ ಪೂರೈಸಿ ಹೊರಬರಲಿದ್ದಾರೆ. ನೂತನ ಕಾನೂನಿನಂತೆ ಅವರು ಸರ್ಕಾರಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಶೇ.೨೦ರಷ್ಟು ವೈದ್ಯರ ಸಮಸ್ಯೆ ನೀಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೌಕರಿ ಖಾಯಂಗೆ ಚಿಂತನೆ: ಆರೋಗ್ಯ ಇಲಾಖೆಯಲ್ಲಿ ಶುಶ್ರೂರಕರು ಹಾಗೂ ಡಿ.ಗ್ರೂಪ್ ನೌಕರರು ಹಂಗಾಮಿ ಕೆಲಸದಲ್ಲಿದ್ದು, ಅವರ ಸೇವೆಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.
೧೦೮ ಆಂಬ್ಯುಲೆನ್ಸ್ ಸೇವೆಯ ಸಿಬ್ಬಂದಿಯ ಬಗ್ಗೆ ನನಗೆ ಗೌರವವಿದೆ. ಆದರೆ ತಾವು ಬಾಗಲಕೋಟೆಗೆ ಭೇಟಿ ನೀಡಿದ್ದಾಗ ೧೦೮ ಆಂಬ್ಯುಲೆನ್ಸ್ ಸೇವೆಯನ್ನು ಮಾಜಿ ಮಂತ್ರಿಯೊಬ್ಬರ ವೈಯಕ್ತಿಕ ಕೆಲಸಕ್ಕೆ ತೊಡಗಿದ್ದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಆದರೆ ಕೆಲವರು ಈ ಘಟನೆಯನ್ನು ತಿರುಚಿ ಲಾಭಪಡೆಯಲೆತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಆಂಬ್ಯುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಗಾಳಿ ಸುದ್ದಿಗಳಿಗೆ ಕಿವಿಗೊಡದೆ ತಮ್ಮ ಒಳ್ಳೆಯ ಸೇವೆ ಮುಂದುವರೆಸುವಂತೆ ಮನವಿ ಮಾಡಿದರು.ಸಚಿವರ ಭೂಮಿ ಪರಿಶೀಲನೆ ಸಂದರ್ಭದಲ್ಲಿ ರಾಮನಗರ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಘುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯನಾರಸಿಂಹ ಇತರರು ಉಪಸ್ಥಿತರಿದ್ದರು.ನಗರದಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸೂಚಿತವಾಗಿರುವ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಸದರಿ ಇಲಾಖೆಯ ಸಚಿವರ ಬಳಿ ಚರ್ಚಿಸಿ ಆದಷ್ಟು ಶೀಘ್ರ ಒಂದು ನಿರ್ಣಯ ಕೈಗೊಂಡು ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ನಗರದ ಜಿಪಂ ಭವನದ ಹಿಂಭಾಗದ ೩.೨೫ ಎಕರೆ ಪ್ರದೇಶದಲ್ಲಿ ೨೫೦ ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಇಲಾಖೆಯ ಸಚಿವರ ಬಳಿ ಚರ್ಚಿಸಿ ಶೀಘ್ರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಈ ಸ್ಥಳಕ್ಕೆ ಬದಲಾಗಿ ಬೇರೊಂದು ಸ್ಥಳ ನೀಡಿದರೆ ತನ್ನ ಆಕ್ಷೇಪವೇನಿಲ್ಲ ಎಂದು ಇಲಾಖೆ ತಿಳಿಸಿದೆ. ಲೋಕೋಪಯೋಗಿ, ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಮಾತು ಕತೆ ನಡೆಸುವುದಾಗಿ ತಿಳಿಸಿದರು.

ಪತ್ರಿಕೆಗಳು ದಾರಿ ತಪ್ಪುತ್ತಿವೆ. ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಿವೆ

ಪತ್ರಕರ್ತರು ಜವಾಬ್ದಾರಿಯುತರಾಗಿ ವರದಿ ಮಾಡಬೇಕು. ವ್ಯಕ್ತಿ ನಿಷ್ಠರಾಗದೆ ವಸ್ತು ನಿಷ್ಠರಾದಲ್ಲಿ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೆಲ ಪತ್ರಿಕೆಗಳು ದಾರಿ ತಪ್ಪುತ್ತಿವೆ. ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಿವೆ ಎಂದು ಆರೋಪಿಸಿದರು.ನಾನು ಶಾಸಕನಾದ ಮೇಲೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದೇನೆ. ಆದರೂ ವಿರೋಧ ಪಕ್ಷದವರಿಂದ ಟೀಕೆ ಟಿಪ್ಪಣಿಗಳು ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೆಲ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾದರೆ ಅಡ್ಡಿ ಪಡಿಸುತ್ತಿದ್ದಾರೆ. ವಿರೋಧ ಪಕ್ಷದವರು ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.ಜಿಪಂ ಸದಸ್ಯರಾದ ಧನಂಜಯ ಮಾತನಾಡಿ, ವಿರೋಧ ಪಕ್ಷಗಳ ನಾಯಕರು ದ್ವೇಷ ರಾಜಕಾರಣ ಬಿಟ್ಟು ಆರೋಗ್ಯಕರ ರಾಜಕಾರಣ ಮಾಡಲಿ. ಸೇವಾ ಮನೋಭಾವನೆ ಬೆಳೆಸಿಕೊಳ್ಳಿ ಎಂದರು.ಜಿಪಂ ಸದಸ್ಯ ರಂಗಸ್ವಾಮಯ್ಯ ಮಾತನಾಡಿ, ನ್ಯಾಯ, ನೀತಿ, ಧರ್ಮ, ಸತ್ಯ ಕಾಪಾಡುವವರು ಪತ್ರಕರ್ತರು. ಯಾವುದು ಸತ್ಯ ಎಂದು ಪತ್ರಿಕೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಸಿ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಎ.ಮಂಜು, ತಾಪಂ ಅಧ್ಯಕ್ಷ ಎಸ್.ಕಾಂತರಾಜು, ಪುರಸಭೆ ಅಧ್ಯಕ್ಷ ಹೆಚ್.ಜೆ.ಪುರಷೋತ್ತಮ್, ಜಿಪಂ ಸದಸ್ಯರಾದ ಮುದ್ದುರಾಜ್, ಯಾದವ್, ವಿಜಯ ಕುಮಾರ್, ಶಂಕರಪ್ಪ, ರಾಮಕೃಷ್ಣಯ್ಯ, ಮಹೇಶಯ್ಯ, ಮುಮ್ಮೆನಹಳ್ಳಿ ಜಯರಾಮು, ಎಂಎನ್.ಜಯರಾಮು, ಚಲುವರಾಜು, ಮೋಹನ್, ಗಂಗಾಧರ್, ಬಾಬು. ಟಿ.ಕೆ.ರಾಮು, ಕಸ್ತೂರಿ ಕಿರಣ್, ಕಬ್ಟಾಳಯ್ಯ, ಸುರೇಶ್, ತಿಪ್ಪಸಂದ್ರ ಹರೀಶ್, ಮಾದೇಶ್ ಇತರರಿದ್ದರು.

ಮಹಿಳಾ ನೌಕರರು ನಡೆಸಿದ ಉಪವಾಸ ಸತ್ಯಾಗ್ರಹ

 ಅರವಿಂದ್ ಗಾರ್ಮೆಂಟ್ಸ್ ಪುನರಾರಂಭ ಮಾಡುವಂತೆ ಒತ್ತಾಯಿಸಿ ಮಹಿಳಾ ನೌಕರರು ನಡೆಸಿದ ಉಪವಾಸ ಸತ್ಯಾಹಗ್ರದಲ್ಲಿ ಹಲವು ನೌಕರರು ಅಸ್ವಸ್ಥರಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.ಕಳೆದ ೧ ತಿಂಗಳ ಹಿಂದೆ ಈ ಕಾರ್ಖಾನೆಯ ಮಾಲೀಕರು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಿರುಕುಳದಿಂದ ಬೇಸತ್ತು ಕಾರ್ಖಾನೆಯನ್ನು ಮುಚ್ಚಿದ್ದು ಹಾಗೂ ಕಾರ್ಮಿಕರಿಗೆ ಮೂರು ತಿಂಗಳ ವಂತಿಗೆಯನ್ನು ನೀಡಿ ಕಾರ್ಖಾನೆಯನ್ನು ಮುಚ್ಚಿರುವುದೇ ಈ ಪ್ರತಿಭಟನೆಗೆ ಮೂಲ ಕಾರಣವಾಗಿದೆಕಾರ್ಖಾನೆಯ ಮಾಲೀಕರು ಕೆಲವು ಸಂಘಟನೆಗಳು ಕೆಲಸ ಮಾಡಲು ಬಿಡದೇ ತಮ್ಮ ಕಾರ್ಖಾನೆ ಕರ್ತವ್ಯಕ್ಕೆ ಅಡ್ಡಿಪಡಿಸುತ್ತ ನೌಕರರು ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಕಾರ್ಖಾನೆ ನಷ್ಟದಲ್ಲಿ ನಡೆಯುತ್ತಿದೆ, ಆದ್ದರಿಂದ ಕಾರ್ಖಾನೆ ಮುಚ್ಚಿರುವುದಾಗಿ ಶಾಸಕ ಡಿ.ಕೆ.ಶಿವಕುಮಾರ್ ರವರು ದೂರವಾಣಿಯಲ್ಲಿ ಮಾತನಾಡಿದಾಗ ತಿಳಿಸಿದ್ದಾರೆ.ಮಾಲೀಕರು ಹಾಗೂ ಕೆಲಸಗಾರರ ನಡುವೆ ಕೆಲವು ಬಾರಿ ಘರ್ಷಣೆ ಏರ್ಪಟ್ಟರೆ, ಇಲ್ಲಿ ಏಕಾಏಕಿ ಕೆಲವು ಸಂಘಟನೆ ಮೂಗುತೂರಿಸಿ ಕಾರ್ಖಾನೆಯ ಉನ್ನತ ಸಿಬ್ಬಂದಿಗಳನ್ನು ತಳಿಸಿದ್ದು, ಈ ಸಂದರ್ಭದಲ್ಲಿ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದೆ ಇದ್ದು, ಸಾಕಷ್ಟು ಸಾರಿ ಇಂತಹ ಅನಾಹುತಗಳು ನಡೆದಿರುವುದೇ ಈ ಕಾರ್ಖಾನೆ ಮುಚ್ಚಿರುವುದಕ್ಕೆ ಮೂಲ ಕಾರಣವೆಂದು ಮಾಲೀಕರು ಪ್ರತಿಕ್ರಿಯಿಸಿದ್ದಾರೆ.ಶಾಸಕರು ಈಗಾಗಲೇ ಮಾಲೀಕರ ನಡುವೆ ಮಾತುಕತೆ ನಡೆಸಿದು, ಈ ಕಾರ್ಖಾನೆ ನಡೆಯಲು ಜಾಗ ಮತ್ತು ರಕ್ಷಣೆ ಕೊಡುವ ಭರವಸೆ ನೀಡಿದ್ದು, ಕೆಲ ಮಹಿಳೆಯರು ಕೆಲಸವನ್ನು ಬೇರೆಕಡೆ ಕೊಡಿಸುವಂತೆ ಶಾಸಕರಲ್ಲಿ ಈಗಾಗಲೆ ಕೇಳಿದ ಹಿನ್ನೆಲೆಯಲ್ಲಿ ಬೇರೆ ಗಾರ್ಮೆಂಟ್ಸ್ನಲ್ಲಿ ಕೆಲಸ ಕೊಡಿಸಲಾಗಿದೆ.ಇನ್ನುಳಿದ ಕೆಲ ಮಹಿಳಾ ಸದಸ್ಯರು ಇದೇ ಕಾರ್ಖಾನೆಯನ್ನು ಪುನರಾರಂಭ ಮಾಡುವಂತೆ ಒತ್ತಾಯಿಸಿ ಕಾರ್ಖಾನೆಯ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರು. ಇದುವರೆಗೂ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದು, ಮಹಿಳಾ ನೌಕರರು ಅಸ್ವಸ್ಥರಾಗಿದ್ದಾರೆ.ಕಾರ್ಖಾನೆಯ ಆಡಳಿತ ಮಂಡಳಿ ಈ ಮಹಿಳೆಯರ ಕೂಗಿಗೆ ಒಗೊಟ್ಟು ನೊಂದ ಮಹಿಳೆಯರಿಗೆ ಕೆಲಸವನ್ನು ಕೊಟ್ಟು ಅವರ ಕುಟುಂಬಕ್ಕೆ ಆಸರೆ ಯಾಗುವುದೇ ಕಾದು ನೋಡಬೇಕಿದೆ.

ಕನಸು ಕಾಣುವುದರೊಂದಿಗೆ ಸಾಧನೆ ಮಾಡುವ ಸಂಕಲ್ಪ ಮಾಡಬೇಕು

ವಿದ್ಯಾರ್ಥಿಗಳು ಸದಾ ಯಶಸ್ಸುಗಳಿಸಲು ಕನಸು ಕಾಣುತ್ತಿರಬೇಕು. ಕನಸು ಕಾಣುವುದರೊಂದಿಗೆ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ಎಂದು ಶಾಸಕ ಡಿ.ಕೆ. ಶಿವಕುಮಾರ್ ಕರೆ ನೀಡಿದರು.ಪಟ್ಟಣದ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಎಸ್‌ಎಸ್‌ಎಲ್ಸಿ ಮುಗಿದ ಮೇಲೆ ೬ ವರ್ಷ ಶ್ರಮ ಪಟ್ಟರೆ ೬೦ ವರ್ಷದವರೆಗೆ ಆರಾಮವಾಗಿ ಜೀವನ ಸಾಗಿಸಬಹುದು ಎಂದು ಕಿವಿಮಾತು ಹೇಳಿದರು.ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯತೆ ಅಳವಡಿಸಿಕೊಂಡರೆ ಸುಲಭವಾಗಿ ಉದ್ಯೋಗ ಸಿಗುತ್ತವೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ಹಿಂದಿದ್ದಾರೆ. ಅವರನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಭಾಷೆಯ ಪ್ರೌಢಿಮೆ ಇದ್ದರಿಂದ ತಾವು ೩ ಮುಖ್ಯಮಂತ್ರಿಗಳ ಬಳಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಅವಕಾಶ ದೊರಕಿತು ಎಂದು ತಿಳಿಸಿದರು.ತಾಪಂ ಮಾಜಿ ಅಧ್ಯಕ್ಷೆ ಸುಕನ್ಯ ಮಾತನಾಡಿ, ಶಿಕ್ಷಣದಿಂದ ಸವಾಲುಗಳನ್ನು ಎದುರಿಸಲು ಸಾಧ್ಯ. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳಾದ ಬಸವರಾಜು, ಬಿ. ಶಿವರಾಮು, ದಾ಼?ಯಿಣಿ, ಎಸ್. ರವಿ, ದಿಲೀಪ್,ಡಿ.ಶಿವಕುಮಾರ್, ಆರ್. ಕೃಷ್ಣಮೂರ್ತಿ, ಮರಿದೇವರು, ಇಕ್ಬಾಲ್ ಹುಸೇನ್, ಸವಿತ ಸುರೇಶ್ ಇತರರಿದ್ದರು.

ದಿಗಂತ್ ಶಾಲೆಯೊಂದನ್ನು ದತ್ತು!


ತಾಲೂಕಿನ ಕನ್ನಮಂಗಲ ಸರ್ಕಾರಿ ಪ್ರಾಥಮಿಕ ಶಾಲೆ ಯನ್ನು ದತ್ತು ತೆಗೆದುಕೊಂಡಿದ್ದು, ಅಭಿವೃದ್ಧಿ ಪಡಿಸುವುದಾಗಿ ಚಿತ್ರನಟ ದಿಗಂತ್ ತಿಳಿಸಿದ್ದಾರೆ.ಕನ್ನಮಂಗಲ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ದತ್ತು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ದಿಗಂತ್, ಶಾಲೆಗೆ ಬೇಕಾದ ಸೌಕರ್ಯಗಳನ್ನು ಅರಿತು ತನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ, ದಿಗಂತ್ ಅವರು ಗಡಿ ಗ್ರಾಮದ ಶಾಲೆಯೊಂದನ್ನು ದತ್ತು ತೆಗೆದುಕೊಂಡಿರುವುದು ಸ್ವಾಗತಾರ್ಹ ದೈಹಿಕ ಶಿಕ್ಷಣಾಧಿಕಾರಿ ಕೆಂಪರಾಜು, ಶಿಕ್ಷಣ ಸಂಯೋಜಕ ಎ.ಪಿ.ಪುಟ್ಟೇಗೌಡ, ಬಿ.ಆರ್.ಪಿ. ವೀರಭದ್ರಯ್ಯ, ಮುಂತಾದವರು ಹಾಜರಿದ್ದರು.


ಯೋಗೇಶ್ವರ್ ಕೊಡುಗೆಯಾದರೂ ಏನು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕಿ ಅನಿತಾಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಟೀಕಿಸುವ ನೈತಿಕತೆ ಸಚಿವ ಸಿ.ಪಿ.ಯೋಗೇಶ್ವರ್ಗೆ ಇಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಹೇಳಿದ್ದಾರೆ.
ಜೆಡಿಎಸ್ಗೆ ಕ್ಷೇತ್ರದಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿರುವುದನ್ನು ಸಹಿಸದ ಯೋಗೇಶ್ವರ್ ಹತಾಶ ಮನೋಭಾವದಿಂದ ಈ ರೀತಿ ಹಗುರ ಹೇಳಿಕೆ ನೀಡುತ್ತಿದ್ದಾರೆ. ಯೋಗೇಶ್ವರ್ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ, ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ಅವರು ಪ್ರಶ್ನಿಸಿದರು.ಅರಣ್ಯ ಸಚಿವರಾಗಿದ್ದುಕೊಂಡು ತಮ್ಮ ಇಲಾಖೆಯಲ್ಲಿ ಯಾವುದೇ ಸಾಧನೆಯನ್ನು ಮಾಡದೆ ಕೇವಲ ಹಣ ಮಾಡುವ ದಂಧೆಗೆ ಅಧಿಕಾರ ದುರ್ಬಳಕೆ ಮಾಡುತ್ತ ಕಾಲಕಳೆಯುತ್ತಿ ರುವ ಯೋಗೇಶ್ವರ್, ಈಗ ಅನಿತಾಕುಮಾರ ಸ್ವಾಮಿ ಅವರ ಹಾಲಿ ಕ್ಷೇತ್ರ ಮಧುಗಿರಿಗೆ ಅಧ್ಯಯನ ಪ್ರವಾಸ ಮಾಡುವುದಾಗಿ ಹೇಳಿರುವುದು ಸಾರ್ವಜನಿಕವಾಗಿ ನಗೆಪಾಟಲಿನ ವಿಷಯವಾಗಿದೆ ಎಂದು ವ್ಯಂಗ್ಯವಾಡಿದರು.

ಡಿಕೆಶಿ ದುರ್ಯೋಧನ ಸಿಂಧ್ಯಾ ಕಿಡಿ

ಕನಕಪುರ ತಾಲೂಕಿನಲ್ಲಿ ದುರ್ಯೋಧನನ ಆಡಳಿತ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಮುಕ್ತಿ ಹೊಂದಬೇಕಾದರೆ ವೀರಭದ್ರಸ್ವಾಮಿ ವರಪ್ರಸಾದಿಂದ ಹುಟ್ಟಿರುವ ನಾನು ಇದನ್ನು ಕೊನೆಗಾಣಿಸಲು ನಿಮ್ಮೆಲ್ಲರ ಸಹಕಾರ ನೀಡಬೇಕೆಂದು ಮಾಜಿ ಗೃಹಸಚಿವ ಪಿ.ಜಿ.ಆರ್. ಸಿಂಧ್ಯಾ ಕರೆ ನೀಡಿದ್ದಾರೆ.ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿಯಲ್ಲಿ ಗ್ರಾಮ ಸಂದರ್ಶನ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ದಬ್ಟಾಳಿಕೆ ಅತಿಯಾಗಿದೆ. ವ್ಯಾಪಾರಸ್ಥರು ಸೇರಿದಂತೆ ಹಲವರು ಕಾಂಗ್ರೆಸ್ ಸೇರದಿದ್ದರೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.ಕಳೆದ ನಾಲ್ಕು ತಿಂಗಳಿಂದ ನಾವು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಳಿತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದಲ್ಲೆ ಬಡವರಿಗೆ ೨ ರೂಪಾಯಿಗೆ ಅಕ್ಕಿ ನೀಡಿದ ಕೀರ್ತಿ ಜೆಡಿಎಸ್ಗೆ ಸೇರುತ್ತದೆ. ಅಲ್ಲದೇ ವೃದ್ಧಾಪ್ಯವೇತನವನ್ನು ನೂರು ರೂ. ನಿಂದ ೪೦೦ ರೂ.ಗೆ ಏರಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧಾಪ್ಯವೇತನವನ್ನು ಸಾವರ ರೂ.ಗೆ ಏರಿಸಲಾಗುವುದು. ಹಾಗೂ ಬಡವರಿಗೆ ಉಚಿತವಾಗಿ ೨೫ ಕೆ.ಜಿ.ಅಕ್ಕಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.ವೃದ್ಧಾಪ್ಯವೇತನ ಏರಿಸುವುದರಿಂದ ವಯಸ್ಸಾದ ಕಾಲದಲ್ಲಿ ಯಾರೂ ನೊಡಿಕೊಳ್ಳಲು ಇರದಿದ್ದ ಪಕ್ಷದಲ್ಲಿ ಈ ಹಣ ಆಸರೆಯಾಗುತ್ತದೆ. ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗುವವರೆಗೆ ತಿಂಗಳಿಗೆ ೩೦೦೦ ರೂ. ನಿಂದ ೫೦೦೦ ರೂ. ವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ತಿಳಿಸಿದರು.ಜೆಡಿಎಸ್ ಮುಖಂಡ ಡಿ.ಎಂ. ವಿಶ್ವಾನಾಥ ಮಾತನಾಡಿ, ಬಡವರಿಗೆ ಸಿಗಬೇಕಾದ ಸಾಗುವಳಿ ಚೀಟಿ ಸಿಗುತ್ತಿಲ. ಒಂದು ವೇಳೆ ಬಡವರಿಗೆ ಸಾಗುವಳಿ ಚೀಟಿ ಕೊಟ್ಟಂಗೆ ಮಾಡಿ ವಾಪಸ್ಸು ಪಡೆಯುವಂತಾಗಿದೆ ಎಂದು ಆರೋಪಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಮರೀಗೌಡ, ಬಿ.ಎಸ್. ಗೌಡ, ಪುರಸಭಾ ಸದಸ್ಯರಾದ ಪುಟ್ಟರಾಜು, ತುಂಗಣಿ ಪುಟ್ಟಸ್ವಾಮಿ, ಕಬ್ಟಾಳೇಗೌಡ, ಸ್ಟುಡಿಯೋ ಚಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸವಾಲ್


ಮಧುಗಿರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು ಮುಂದಿನ ತಿಂಗಳು ತಾಲೂಕಿನಿಂದ ಅಧ್ಯಯನ ಪ್ರವಾಸ ಮಾಡಲಿದ್ದೇವೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.ಗರಕಹಳ್ಳಿ ಏತನೀರಾವರಿ ಯೋಜನೆಯಿಂದ ತುಂಬಿರುವ ತಾಲೂಕಿನ ಕೃಷ್ಣಾಪುರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಶಾಸಕಿ ಅನಿತಾ ಕುಮಾರಸ್ವಾಮಿ ಮಧುಗಿರಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಅವಲೋಕಿಸಲೆಂದು ಪ್ರವಾಸ ಏರ್ಪಡಿಸಿದ್ದೇವೆ ಎಂದರು.
ತಾಲೂಕಿನ ಎಲ್ಲಾ ಜಿಪಂಗಳಿಂದ ಸೇರಿ ಸುಮಾರು ೧೦೦ ಬಸ್ಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ತಾಲೂಕಿನ ಪ್ರಜಾಟಿವಂತರೊಡಗೂಡಿ ಈ ಪ್ರವಾಸ ಮಾಡಲಿದ್ದು, ಅಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲೆಂದೆ ಈ ಅಧ್ಯಯನ ಪ್ರವಾಸ ಏರ್ಪಡಿಸಿದ್ದೇವೆ ಎಂದು ಹೇಳಿದರು.ತಾಲೂಕಿನ ಮಹತ್ವಕಾಂಕ್ಷಿ ಶಿಂಷಾ ಕಣ್ವ ಯೋಜನೆ ಕಾಮಗಾರಿಗೆ ಮುಂದಿನ ತಿಂಗಳು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಕಾಮಗಾರಿಗೆ ಎಲ್ಲಾ ಪ್ರಕ್ರಿಯೆ ಮುಗಿದಿದ್ದು, ಮುಂದಿನ ತಿಂಗಳು ಅಧಿಕೃತ ಚಾಲನೆ ದೊರೆಯಲಿದೆ ಎಂದರು.ಈಗ ಕೃಷ್ಣಾಪುರ ಕೆರೆಗೆ ನೀರು ಹರಿಸಲಾಗಿದ್ದು, ಕೃಷ್ಣಾಪುರದಲ್ಲಿರುವ ಮತ್ತೂಂದು ಕೆರೆಗೆ ಹಾಗೂ ಮೆಂಗಳ್ಳಿ ಕೆರೆಗೆ ನೀರು ಹರಿಸಿದರೆ ಗರಕಹಳ್ಳಿ ಏತ ನೀರಾವರಿಯ ಮೊದಲನೆ ಹಂತದ ಯೋಜನೆ ಪೂರ್ಣಗೊಳ್ಳಲಿದೆ. ತಾಲೂಕಿನಲ್ಲಿ ಈಗ ೧೬ ಕೆರೆಗಳಿಗೆ ನೀರು ಹರಿಸಿದಂತಾಗಿದೆ ಎಂದು ವಿವರಿಸಿದರು.ಮದ್ದೂರು ತಾಲೂಕಿನ ಅಂಕೇಗೌಡನದೊಡ್ಡಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅವರ ಮನವಿ ಮೇರೆಗೆ ಗ್ರಾಮಕ್ಕೆ ನೀರು ಹರಿಸುವ ಯೋಚನೆ ಮಾಡಲಾಗಿದೆ. ಕೇವಲ ಜನತೆಗೆ ಮಾತ್ರವಲ್ಲ ಅರಣ್ಯ ಜೀವಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕಾಡಿನಲ್ಲಿ ಕೆರೆ ನಿರ್ಮಿಸಿ ನೀರು ಹರಿಸಲಾಗುವುದು ಎಂದು ತಿಳಿಸಿದರು.ತಾಲೂಕಿನ ರೈತಾಪಿ ಜನಕ್ಕೆ ಅನುಕೂಲವಾಗಲು ಹಲವಾರು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಕಾಂಕ್ರಿಟ್ ರಸ್ತೆ, ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ ಆಗಬೇಕಾಗಿದ್ದು, ಮುಂದಿನ ತಿಂಗಳು ಎಲ್ಲಾ ಕಾಮಗಾರಿಗಳಿಗೂ ಚಾಲನೆ ದೊರೆಯಲಿದೆ. ಅಕ್ಕೂರು ಕೆರೆಗೆ ನೀರು ಹರಿಸುವ ಯೋಜನೆ ಕಾಮಗಾರಿಗೆ ತಾತ್ಕಾಲಿಕ ತಡೆಯಾಗಿದ್ದು. ಈ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹುಲುವಾಡಿ ಶಿವಕುಮಾರ್, ಮಲವೇಗೌಡ, ಸಿಂಗರಾಜಪುರ ರಾಜಣ್ಣ, ಹರೂರು ರಾಜಣ್ಣ, ಎಸ್.ಸಿ.ಶೇಖರ್, ಕೃಷ್ಣಾಪುರ ಮಹಾಲಿಂಗಯ್ಯ, ಪ್ರೇಮ್ಕುಮಾರ್, ತಹಸೀಲ್ದಾರ್ ಅರುಣಪ್ರಭ ಇತರರು ಹಾಜರಿದ್ದರು.


ಸಿ.ಪಿ. ಯೋಗೇಶ್ವರ್ ಎಚ್ಚರಿಕೆ

 ಅಧಿಕಾರಿಗಳು ನನ್ನನ್ನು ಓಲೈಕೆ ಮಾಡುವುದನ್ನು ಬಿಟ್ಟು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರಿತು ಅವುಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಶೀಲರಾಗಬೇಕು ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಎಚ್ಚರಿಕೆ ನೀಡಿದರು.ತಾಲೂಕಿನ ಬೇವೂರು ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ ಮಾತ್ರ ಅಧಿಕಾರಿಗಳು ತೋರಿಕೆಗಾಗಿ ಕಾರ್ಯ ನಿರ್ವಹಿಸದೆ ನಾನು ಇಲ್ಲದೇ ಇರುವ ಸಮಯದಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಏನೆಂದು ತಿಳಿದು ಅವುಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಅವರು ಸೂಚನೆ ನೀಡಿದರು.ತಾಲೂಕಿನ ಅಭಿವೃದ್ಧಿಗಾಗಿಯೇ ನೂರಾರು ಕೋಟಿ ಅನುದಾನ ಬಿಡುಗಡೆಗೊಳ್ಳುತ್ತಿದ್ದು, ಹಲವಾರು ಕಾಮಗಾರಿಗಳು ಪೂರ್ಣಗೊಳ್ಳದೆ ಅರ್ಧದಲ್ಲಿಯೇ ನಿಂತಿವೆ. ಇವುಗಳ ಕಡೆ ಗಮನ ಹರಿಸಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ನಿಮ್ಮ ಶ್ರಮ ಬಹಳ ಅವಶ್ಯಕವೆಂದು ತಿಳಿಸಿದರು.ರಾಜಕಾರಣಿಗಳು ನಾವು ಇಂದು ಬರುತ್ತೇವೆ, ನಾಳೆ ಹೋಗುತ್ತೇವೆ, ಆದರೆ ಅಧಿಕಾರಗಳು ಆಗಲ್ಲ, ನಿಮ್ಮ ಕರ್ತವ್ಯ ನಿರ್ವಹಿಸುವವರೆವಿಗೂ ಜನ ಸಾಮಾನ್ಯರ ಸಂಪರ್ಕದಲ್ಲಿ ಇರಬೇಕಾಗಿರುತ್ತನಿದೆ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಆರ್.ಎಂ. ಮಲವೇಗೌಡ, ಪುಟ್ಟಸಿದ್ದೇಗೌಡ, ಹರೂರು ರಾಜಣ್ಣ, ಹುಲುವಾಡಿ ಶಿವಕುಮಾರ್, ಗ್ರಾ.ಪಂ. ಸದಸ್ಯ ರಮೇಶ್, ಹಾಪ್ಕಾಮ್ಸ್ ನಿರ್ದೇಶಕ ಎಸ್.ಸಿ.ಶೇಖರ್, ತಿಮ್ಮೇಶ್ ಪ್ರಭು ಇತರರು ಉಪಸ್ಥಿತರಿದ್ದರು.

ನಿಮ್ಮೆಲ್ಲರ ಆಶೀರ್ವಾದ ಇರಲಿ

 ಚನ್ನಪಟ್ಟಣ ಕ್ಷೇತ್ರ ನಮ್ಮ ಕುಟುಂಬಕ್ಕೆ ಕಣ್ಣಿದ್ದಂತೆ, ಆದರೂ ಈ ಕ್ಷೇತ್ರ ನಮ್ಮಿಂದ ಕೆಲ ಚುನಾವಣೆಗಳಲ್ಲಿ ದೂರವಾಗಿದೆ. ಮತ್ತೆ ಈ ಕ್ಷೇತ್ರವನ್ನು ಪಡೆಯಲು ಶ್ರಮಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ಪತ್ನಿ ಅನಿತಾರ ಜೆಡಿಎಸ್ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಅವರು, ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಭೇಟಿ ಪತ್ನಿ ಅನಿತಾರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರಬುನಾದಿಯಿತ್ತು. ಆದರೆ ತಮ್ಮ ತಮ್ಮಲ್ಲೆ ಉಂಟಾದ ಭಿನ್ನಾಭಿಪ್ರಾಯ ಹಾಗೂ ಲೋಪದೋಷಗಳಿಂದ ಜೊತೆಗೆ ಸ್ವಯಂಕೃತ ಅಪರಾಧಗಳಿಂದ ಈ ಕ್ಷೇತ್ರ ನಮ್ಮ ಕೈತಪ್ಪಿದೆ. ಮುಂದೆ ಇಂತಹ ತಪ್ಪು ಮಾಡದೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವುದಾಗಿ ಭರವಸೆ ನೀಡಿದರು.ತಾಲೂಕು ಜೆಡಿಎಸ್ನಲ್ಲಿ ಮುಖಂಡರು ತಮ್ಮ ತಮ್ಮಲ್ಲಿ ಇರುವ ಅಸಮಧಾನ ಹಾಗೂ ಗೊಂದಲಗಳನ್ನು ಬಗೆಹರಿಸಿಕೊಂಡು ಎಲ್ಲರೂ ಮುಂಬರುವ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಪಕ್ಷದಲ್ಲಿರುವ ಕಾರ್ಯಕರ್ತರಲ್ಲಿ ಕೆಲವರು ಗೊಂದಲವನ್ನುಂಟು ಮಾಡಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಸೊಪ್ಪು ಹಾಕದೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ತಾಲೂಕಿನಲ್ಲಿ ಪಕ್ಷಕ್ಕೆ ನೆಲೆಯಿದೆ ಎಂದು ತೋರಿಸಬೇಕು. ಮುಂದಿನ ವಾರ ತಾಲೂಕಿನಲ್ಲಿ ನೂತನವಾಗಿ ಪಕ್ಷದ ಕಚೇರಿ ಹಾಗೂ ವಸತಿ ವ್ಯವಸ್ಥೆ ಮಾಡಲಾಗುತ್ತಿದ್ದು, ವಾರದಲ್ಲಿ ನಾಲ್ಕೂ ದಿನ ಅನಿತಾ ಅವರು ಇಲ್ಲಿಯೆ ಮೊಕ್ಕಂ ಹೂಡಲಿದ್ದಾರೆ. ಕಾರ್ಯಕರ್ತರು ತಮ್ಮ ದೂರು ದುಮ್ಮಾನವನ್ನು ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ವಿವರಿಸಿದರು.ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಚನ್ನಪಟ್ಟಣ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಭಂದವಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಂತೆ ಹಾಗೂ ಇಲ್ಲಿರುವ ಕಾರ್ಯಕರ್ತರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು , ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.ತಾಲೂಕಿನಲ್ಲಿ ಸಂದರ್ಶಿಸಿದ ಹಲವಾರು ಹಳ್ಳಿಗಳ ಅಭಿವೃದ್ಧಿಗಾಗಿ ಸಂಸದ ನಿಧಿಯಿಂದ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.ನನ್ನ ಪತಿ ಮುಖ್ಯಮಂತ್ರಿಯಾಗಿ ೨೦ ತಿಂಗಳು ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ಪ್ರೇರಣೆಯಾಗಿದ್ದು, ಮಧುಗಿರಿ ಕ್ಷೇತ್ರದಂತೆ ತಾಲೂಕನ್ನು ಕೂಡ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಕಾರ್ಯಕರ್ತರು ಪೂರ್ಣ ಕುಂಭ ಮೇಳದೊಂದಿಗೆ ಎಚ್ಡಿಕೆ ದಂಪತಿಗೆ ಅದ್ಧುರಿ ಸ್ವಾಗತ ಕೋರಿದರು. ಕೆಂಗಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಂದಾರಗುಪ್ಪೆ, ಪೌಳಿದೊಡ್ಡಿ, ಚೋಳಮಾರನಹಳ್ಳಿ, ಕನ್ನಮಂಗಲ, ಅಂಗರಹಳ್ಳಿ, ದಶವಾರ, ಮಾಕಳಿ, ನಾಯಿದೊಳ್ಳೆ ಸೇರಿದಂತೆ ನಾನಾ ಗ್ರಾಮಗಳಲ್ಲಿ ಗ್ರಾಮ ಸಂದರ್ಶನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.ಮಾಜಿ ಉಪಸಭಾಪತಿ ಪುಟ್ಟಣ್ಣ, ಶಾಸಕ ಕೆ.ರಾಜು, ವಿಧಾನ ಪರಿಷತ್ ಸದಸ್ಯ ಈ.ಕೃಷ್ಣಪ್ಪ, ಮಾಜಿ ವಿಧಾನಪರಿಷತ್ ಸದಸ್ಯ ಮರಿಲಿಂಗೇಗೌಡ, ರಾಜ್ಯ ಪ್ರಧಾನಕಾರ್ಯದರ್ಶಿ ಡಿ.ಎಂ.ವಿಶ್ವನಾಥ್, ರಾಜ್ಯ ಎಸ್ಸಿ.ಎಸ್ಟಿ. ಅಧ್ಯಕ್ಷ ಡಾ. ಅನ್ನದಾನಿ, ಜಿಪಂ ಅಧ್ಯಕ್ಷೆ ಹಂಸಕುಮಾರಿ, ರಾಮನಗರ ನಗರಸಭೆ ಅಧ್ಯಕ್ಷ ಸಾಬಾನ್ಸಾಬ್, ಜೆಡಿಎಸ್ ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ರೇಖಾ, ಜಿಪಂ ಸದಸ್ಯರಾದ ರಘುಕುಮಾರ್, ರಮೇಶ್, ತಾಪಂ ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಮಾರೇಗೌಡ, ಚಿನ್ನಗಿರಿಗೌಡ, ಭಾನುಪ್ರಕಾಶ್, ಗುರುಕುಮಾರ್, ಮುಖಂಡರಾದ ವಂದಾರಗುಪ್ಪೆ ಶಂಭುಗೌಡ, ಜಯಪ್ರಕಾಶ್, ತಮ್ಮಣ್ಣ ಇತರರು ಉಪಸ್ಥಿತರಿದ್ದರು.ಪಕ್ಷದಲ್ಲಿ ಗೊಂದಲವುಂಟು ಮಾಡುವವರನ್ನು, ಕಾಲೆಳೆಯುವವರನ್ನು ಹತ್ತಿರಕ್ಕೆ ಸೇರಿಸಬೇಡಿ ಎಂದು ಹಲವಾರು ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅನಿತಾ ಕ್ಷೇತ್ರದಲ್ಲಿ ವಾರಗಳಲ್ಲಿ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿ ತಮ್ಮ ಸಮಸ್ಯೆ ಬಗೆಹರಿಸುತ್ತಾರೆ ಎಂದರು. ಕಾರ್ಯಕರ್ತರು, ನಾಲ್ಕು ದಿನವಲ್ಲ ವಾರ ಪೂರ್ತಿ ಇಲ್ಲಿಯೇ ಇರಲಿ, ಪಕ್ಷದಲ್ಲಿ ದ್ರೋಹಿಗಳಿಗೆ ಬೆಲೆ ಕೊಡಬೇಡಿ ಎಂದು ಕಾರ್ಯಕರ್ತರು ಒತ್ತಾಯಿಸಿದರು. ಕಾರ್ಯಕರ್ತರ ಈ ಕೂಗಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಹಿಂದೆ ಇಂತಹ ತಪ್ಪುಗಳಾಗಿರಬಹುದು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.ಚನ್ನಪಟ್ಟಣ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಭಂದವಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಂತೆ ಹಾಗೂ ಇಲ್ಲಿರುವ ಕಾರ್ಯಕರ್ತರ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.
                                                                                                                             ಅನಿತಾ, ಶಾಸಕಿ

ಅನಿತಾಕುಮಾರಸ್ವಾಮಿ ತಾಲೂಕು ಪ್ರವಾಸ

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಬೆನ್ನಲ್ಲೇ ಸೆ. ೪ರಿಂದ ನಾಲ್ಕು ದಿನಗಳ ಕಾಲ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಗ್ರಾಮ ಸಂದರ್ಶನ ಹಮ್ಮಿಕೊಳ್ಳಲಿದ್ದಾರೆ. ಸೆ.೪ರಂದು ಪಟ್ಟಣದ ಕೆಂಗಲ್ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ತಾಲೂಕಿನ ೫ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲಿದ್ದಾರೆ.ತಾಲೂಕು ಜೆಡಿಎಸ್ ಸಭೆ: ಅನಿತಾಕುಮಾರಸ್ವಾಮಿ ತಾಲೂಕು ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಒಕ್ಕೊರಲಿನಿಂದ ನಿರ್ಣಯಿಸಿದರು. ಯೋಗೇಶ್ವರ್ ಅಧಿಕಾರವಧಿಯಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದು, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಅಗತ್ಯ ಎಂದು ತೀರ್ಮಾನಿಸಿದ ಪಕ್ಷದ ಮುಖಂಡರು ಒಕ್ಕೊರಲಿನಿಂದ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದರು. ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಮುಖಂಡರಾದ ಸಿಂ.ಲಿಂ.ನಾಗರಾಜು, ಮಾಕಳಿ ಮಹೇಶ್, ಪಾರ್ಥಸಾರಥಿ ಇತರರು ಉಪಸ್ಥಿತರಿದ್ದರು.

ಕಲ್ಲುಗಣಿಗಾರಿಕೆ

 ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆಯನ್ನು ಸುರಕ್ಷಿತಾ ವಲಯಕ್ಕೆ ವರ್ಗಾಯಿಸುವ ಅಮೃಘಗಳಿಗೆ ಗೊತ್ತು ಪಡಿಸಲು ಜಿಲ್ಲಾಡಳಿತವೇ ನಿರ್ಲಕ್ಷ್ಯ ತಳೆದಿದೆಯೋ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಡ್ಡಗಾಲು ಹಾಕುತ್ತಿದೆಯೋ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ನ್ಯಾಯಾಲಯಗಳು ಕಲ್ಲು ಅರೆಯುವ ಯಂತ್ರಗಳನ್ನು (ಕ್ರಷರ್) ಸುರಕ್ಷಿತಾ ವಲಯಕ್ಕೆ ಸ್ಥಳಾಂತರಿಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸುರಕ್ಷಿತಾ ವಲಯವನ್ನು ಗುರುತಿಸಲಾಗಿದೆ.೨೦೧೨ರ ಮಾರ್ಚ್ ೬ರೊಳಗೆ ಕಲ್ಲು ಅರೆಯುವ ಉದ್ಯಮ ಸುರಕ್ಷಿತಾ ವಲಯಕ್ಕೆ ಸ್ಥಳಾಂತರಗೊಳ್ಳಬೇಕಾಗಿತ್ತು. ಆದರೆ ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕ್ರಷರ್ ಸುರಕ್ಷಿತಾ ವಲಯಕ್ಕೆ ಸ್ಥಳಾಂತರಗೊಂಡಿಲ್ಲ.ಜಿಲ್ಲೆಯಲ್ಲಿ ಮಾಗಡಿ ತಾಲೂಕು ಮತ್ತು ಕನಕಪುರ ತಾಲೂಕುಗಳಲ್ಲಿ ಸುರಕ್ಷಿತಾ ವಲಯವನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಲ್ಲಿಸಿದೆ.
ಆದರೆ ಕರ್ನಾಟಕ ರೆಗ್ಯೂಲೇಷನ್ ಆಫ್ ಸ್ಟೋನ್ ಕ್ರಷರ್ ಆಕ್ಟ್ ೨೦೧೧ರ ಸೆಕ್ಷನ್ ೬(೨)ರ ಪ್ರಕಾರ ನಿಗದಿ ಪಡಿಸಿರುವ ಮಾನದಂಡಗಳನ್ನು ಅನುಸರಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಮಾರ್ಚ್ ೨೧ರಂದೇ ಪತ್ರ ಸಂಖ್ಯೆ ಪಿಸಿಬಿ/೯೦/ಎಂ ಐ ಎನ್/೨೦೧೨ ಮೂಲಕ ಜಿಲ್ಲಾಡಳಿತಕ್ಕೆ ಪತ್ರ ಬರೆದು, ಕಾಯ್ದೆಯಲ್ಲಿರುವ ಮಾನದಂಡಗಳ ಪ್ರಕಾರ ಸುರಕ್ಷಿತಾ ವಲಯವನ್ನು ತಕ್ಷಣ ಗುರುತಿಸುವಂತೆ ತಿಳಿಸಿದೆ.ಈಗಾಗಲೇ ನ್ಯಾಯಾಲಯಗಳು ವಿಧಿಸಿರುವ ಗಡುವು ದಿನಾಂಕ ಮುಗಿದಿದ್ದು, ಜಿಲ್ಲೆಯಲ್ಲಿ ಕ್ರಷರ್ಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಮಂಡಳಿಯ ಮುಂದಿದೆ ಎಂದು ಕೂಡ ಅದು ಸ್ಪಷ್ಟಪಡಿಸಿದೆ. ಆದರೆ ಜಿಲ್ಲಾಡಳಿತ ಇದ್ಯಾವುದಕ್ಕೂ ಸೊಪ್ಪು$ಹಾಕದಿರುವುದರ ಹಿಂದಿನ ಮರ್ಮವೇನು ಎಂಬುದೇ ಸೋಜಿಗ!
ಮಾಲಿನ್ಯ ಮಂಡಳಿಯ ಆಕ್ಷೇಪ ಏನು ?ಜಿಲ್ಲೆಯ ಮಾಗಡಿ ತಾಲೂಕು ಕಸಬಾ ಹೋಬಳಿ ವೆಂಗಳಪ್ಪನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ ೧೨, ೧೩, ೧೪,೧೫,೧೬ ಮತ್ತು ೨೨ ಹಾಗೂ ಪಣಕನಕಲ್ಲು ಗ್ರಾಮದ ಸರ್ವೆ ಸಂಖ್ಯೆ ೩೦, ೩೪, ೩೬ ಮತ್ತು ೪೭ರ ೨೬೦ ಎಕರೆ ಭೂಮಿಯನ್ನು ಸುರಕ್ಷಿತಾ ವಲಯ ೧ ಎಂದು ಕನಕಪುರ ತಾಲೂಕು ಸಾತನೂರು ಹೋಬಳಿ ಆನಮಾನಹಳ್ಳಿ ಮತ್ತು ನರಿಪುರ ಗ್ರಾಮಕ್ಕೆ ಸೇರಿದ ಸರ್ವೆ ಸಂಖ್ಯೆಗಳಲ್ಲಿ ೧೪೦ ಎಕರೆ ಭೂ ಪ್ರದೇಶವನ್ನು ಸುರಕ್ಷಿತಾ ವಲಯ ೨ ಎಂದು ಜಿಲ್ಲಾಡಳಿತ ಗುರುತಿಸಿದೆ.ಸರ್ಕಾರ ವಿಧಿಸಿರುವ ನಿಬಂಧನೆಗಳಂತೆ ಸುರಕ್ಷಿತಾ ವಲಯದಿಂದ ಯಾವುದೇ ಅರಣ್ಯ ಪ್ರದೇಶ ೧ ಕಿ.ಮೀ ಅಂತರದಲ್ಲಿರ ಬೇಕು. ಆದರೆ ಮಾಗಡಿ ತಾಲೂಕಿನಲ್ಲಿ ಗುರುತಿಸಿರುವ ಸುರಕ್ಷಿತಾ ವಲಯದ ಬಳಿ ಕೇವಲ ೧೮೦ ಮೀಟರ್ ಅಂತರದಲ್ಲಿ ಅರಣ್ಯವಿದೆ. ಅಂದರೆ ೮೨೦ ಮೀಟರ್ ದೂರವನ್ನು ನಿಬಂಧನೆಗಳಿಂದ ಸಡಿಲಗೊಳಿಸಬೇಕಾಗಿದೆ. ವಸತಿ ಪ್ರದೇಶಗಳಿಂದಲೂ ಕನಿಷ್ಠ ೧ ಕಿ.ಮೀ ಅಂತರವನ್ನು ಕಾಯ್ದು ಕೊಳ್ಳಬೇಕು. ಆದರೆ ವೆಂಗಳಪ್ಪನ ಹಳ್ಳಿ ವಸತಿ ಪ್ರದೇಶ ಹಾಗೂ ಸರ್ಕಾರಿ ಶಾಲೆ ಕೇವಲ ೩೦೦ ಮೀಟರ್ ದೂರದಲ್ಲಿದೆ.ಪಣಕನಕಲ್ಲು ಜನವಸತಿ ಪ್ರದೇಶ ಸಹ ಕೇವಲ ೬೦೦ ಮೀಟರ್ಗಳ ಅಂತರದಲ್ಲಿದೆ. ಇನ್ನುಳಿದಂತೆ ಪೌರ ನಿಗಮ ಪರಿಮಿತಿ ಕೂಡ ೮ ಕಿ.ಮೀ.ಗಳ ಅಂತರದಲ್ಲಿ ಇಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನಿಬಂಧನೆಗಳ ಪ್ರಕಾರ ಮಾನದಂಡಗಳನ್ನು ಅನುಸರಿಸಿ ಸ್ಥಳವನ್ನು ಗುರುತಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ವಿಳಂಬಕ್ಕೆ ಜಿಲ್ಲಾಡಳಿತ ಹೊಣೆಯೋ, ಮಾಲಿನ್ಯ ನಿಯಂತ್ರಣ ಮಂಡಳಿಯೋ?
ಕರ್ನಾಟಕ ರೆಗ್ಯೂಲೇಷನ್ ಆಫ್ ಸ್ಟೋನ್ ಕ್ರಷರ್ ಆಕ್ಟ್ ೨೦೧೧ರ ಪ್ರಕಾರ ಕೆಲವೊಂದು ಅಂಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ರಾಮನಗರ ಚಿಕ್ಕ ಜಿಲ್ಲೆಯಾಗಿರುವುದರಿಂದ ಕಷ್ಟ ಸಾಧ್ಯ. ಇಂತಿಷ್ಟೆ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬುದು ಕೆಲವೊಮ್ಮೆ ಅಸಾಧ್ಯವಾಗುತ್ತದೆ. ಈ ವಿಚಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ತಿಳಿದಿದ್ದರೂ ಜಿಲ್ಲಾಡಳಿತ ಗುರುತಿಸಿರುವ ಸುರಕ್ಷಿತಾ ವಲಯಗಳಿಗೆ ಅನುಮತಿ ನೀಡಲು ಅಡ್ಡಗಾಲು ಹಾಕುತ್ತಿದೆ ಎಂದು ಕೆಲವು ಸಾರ್ವಜನಿಕರು ಆರೋಪಿಸಿದ್ದಾರೆ.ಮಾಲಿನ್ಯ ನಿಯಂತ್ರಣ ಮಂಡಳಿತ ಎತ್ತಿರುವ ಆಕ್ಷೇಪಗಳ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅಧಿಕಾರವಿದೆ. ಆದಷ್ಟು ನಿಬಂಧನೆಗಳ ಪ್ರಕಾರವೇ ಕ್ರಮಗಳನ್ನು ಕೈಗೊಂಡು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ವಾಸ್ತವಾಂಶಗಳ ಅರಿವು ಮೂಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಸಹ ಸಾರ್ವಜನಿಕ ವಲಯದಿಂದಲೇ ಕೇಳಿ ಬಂದಿದೆ.ಅಕ್ರಮ ಜಲ್ಲಿ ಕ್ರಷರ್ಗಳು ಮತ್ತು ಕಲ್ಲು ಗಣಿಗಾರಿಕೆಯಿಂದ ರಾಮನಗರ ಜಿಲ್ಲೆಯ ಬಂಡೆಗಳು ಕರಗಿ ಹೋಗುತ್ತಿರುವುದರ ಬಗ್ಗೆ ಜಿಲ್ಲೆಯ ಜನತೆ ನಿರಂತರ ತಮ್ಮ ಅಸಮಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸುರಕ್ಷಿತಾ ವಲಯ ಸ್ಥಾಪನೆಯಾದರೆ ಕನಿಷ್ಠ ಅಕ್ರಮ ಕಲ್ಲುಗಣಿಗಾರಿಕೆಯಾದರು ನಿಲ್ಲುತ್ತದೆ ಎಂಬುದು ಜಿಲ್ಲೆಯ ಜನತೆಯ ಆಶಯ. ಜನತೆಯ ಆಶಯಗಳನ್ನು ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮಾನ್ಯ ಮಾಡಬೇಕಾಗಿದೆ.

ಗಾಂಧಿಜಿಗೆ ಅಪಮಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ತಿಪ್ಪೆಗೆಸೆದು ಅವಮಾನ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ಕೃತ್ಯ ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ನಗರದ ಮಿನಿ ವಿಧಾನಸೌಧ ಹಿಂಭಾಗ ಅಬಕಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳು ಇರುವ ಕಟ್ಟಡದ ಬಳಿ ಇರುವ ತಿಪ್ಪೆಯಲ್ಲಿ ಮಹಾತ್ಮ ಗಾಂಧೀಜಿ ಭಾವ ಚಿತ್ರವನ್ನು ಕಂಡ ನಾಗರಿಕರು ಪ್ರತಿಭಟನೆ ನಡೆಸಿ ಇದರ ಕುರಿತು ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ರವಿ ತಿರ್ಲಾಪೂರ ತಿಪ್ಪೆಯಲ್ಲಿದ್ದ ಗಾಂಧೀಜಿ ಭಾವಚಿತ್ರ ತೆಗೆಸಿ ಯಾವ ಕಚೇರಿಯಿಂದ ಈ ಕೃತ್ಯ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿದರು. ಲೋಕೋಪಯೋಗಿ ಇಲಾಖೆಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಭಾವ ಚಿತ್ರದ ಪಕ್ಕದಲ್ಲಿ ಮಹಾತ್ಮ ಗಾಂಧೀಜಿ ಭಾವ ಚಿತ್ರವಿದ್ದು, ಈ ಭಾವಚಿತ್ರವನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಈ ಕೃತ್ಯ ಎಸಗಿದ್ದಾರೆ. ಈ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಎಂದು ತಹಸೀಲ್ದಾರ್ ಸ್ಥಳದಲ್ಲೇ ಹಾಜರಿದ್ದ ಐಜೂರು ಪೊಲೀಸ್ ಎಸ್‌ಐ ಶೋಭಾ ಅವರಿಗೆ ಸೂಚನೆ ನೀಡಿದರು. ಐಜೂರು ಪೊಲೀಸರು ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಕುಮಾರ್ನನ್ನು ವಿಚಾರಣೆಗೆಂದು ಕರೆದೊಯ್ದು ತನಿಖೆ ನಡೆಸಿತ್ತಿದ್ದಾರೆ.

ಶಿಕ್ಷಕರ ಜಗಳದಿಂದ ವಿದ್ಯಾರ್ಥಿಗಳು ಪರಿತಪ್ಪಿಸುವಂತಾಗಿದೆ.

ಗಂಡ ಹೆಂಡತಿ ಜಗಳದಿಂದ ಕೂಸು ಬಡವಾಯಿತು ಎಂಬಂತೆ ತಾಲೂಕಿನ ಬ್ರಹ್ಮಣಿಪುರದ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಕರ ಜಗಳದಿಂದ ವಿದ್ಯಾರ್ಥಿಗಳು ಪರಿತಪ್ಪಿಸುವಂತಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಶಾಲೆಯಲ್ಲಿ ಮುಖ್ಯಶಿಕ್ಷರು ಹಾಗೂ ಸಹ ಶಿಕ್ಷಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮುಖ್ಯಶಿಕ್ಷಕಿ ನಾಗರತ್ನಮ್ಮ ಕಳೆದ ೯ ದಿನಗಳಿಂದ ಶಾಲೆಗೆ ರಜೆ ಹಾಕಿದ್ದರೂ ಬೇರೆ ಶಿಕ್ಷಕರಿಗೆ ಚಾರ್ಜ್ ಕೊಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಲ್ಲದೇ ಸಹ ಶಿಕ್ಷಕ ರಾಜು ಎಂಬುವವರು ಶಿಕ್ಷಕಿಯರ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿ ದೂರು ನೀಡಿರುವುದಕ್ಕೆ ಮುಖ್ಯ ಶಿಕ್ಷಕಿ ಸಹಿ ಮಾಡಿದ್ದಾರೆ. ಆದರೆ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಈ ಕುರಿತು ಮುಖ್ಯಶಿಕ್ಷಕಿ ನಾಗರತ್ನಮ್ಮ ಅವರನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಈಗಾಗಲೆ ಈ ಸಂಬಂಧ ಬಿಇಓ ಶಿವಪ್ಪಅವರ ಗಮನಕ್ಕೆ ತರಲಾಗಿದೆ. ಅವರು ಇದರ ಬಗ್ಗೆ ತನಿಖೆ ಕೂಡ ನಡೆಸಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ತಿಳಿಸಿದರು.ಶಾಲೆಯಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಡಿಪಿಐ ಅವರ ಗಮನಕ್ಕೂ ತಂದರೂ ಯಾವುದೇ ಕ್ರಮ ಕ್ಯೆಗೊಂಡಿಲ್ಲ. ಅದ್ದರಿಂದ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಬಿಇಓ ಹಾಗೂ ಡಿಡಿಪಿಐ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವವರೆಗೂ ಶಾಲೆಯ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.ಬಿಇಓ ಅನುಪಸ್ಥಿತಿಯಲ್ಲಿ ದೈಹಿಕ ಶಿಕ್ಷಣ ಸಂಯೋಜನಾಧಿಕಾರಿ ಕೆಂಪರಾಜು ಶಾಲೆಗೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೋಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಜಗ್ಗದೆ ಶಾಲೆಗೆ ಬೀಗ ಹಾಕಿ ಮಕ್ಕಳನ್ನು ಮನೆಗೆ ಕಳುಹಿಸಿದರು. ಮುಖ್ಯಶಿಕ್ಷಕಿ ಹಾಗೂ ಸಹ ಶಿಕ್ಷಕರ ಮುಸುಕಿನ ಗುದ್ದಾಟದಿಂದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ.

ಅಧಿಕಾರಿಗಳ ಬಳಿ ತಿಂಗಳ ವಂತಿಗೆ

 ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು   ಸಚಿವ ಸಿ.ಪಿ.ಯೋಗೇಶ್ವರ್ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡದೇ, ಅಧಿಕಾರಿಗಳ ಬಳಿ ತಿಂಗಳ ವಂತಿಗೆ ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.ಪಟ್ಟಣದ ಚರ್ಚ್ರಸ್ತೆಯಲ್ಲಿ ಹೆಚ್.ಡಿ.ಕೆ ಯುವಸೇನೆ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಧಿಕಾರಿಗಳಿಂದ ವಸೂಲಿ ಮಾಡುತ್ತಿರುವ ಹಣವನ್ನು ಮುಂದಿನ ಚುನಾವಣೆಯಲ್ಲಿ ಚೆಲ್ಲಿ ಮತ್ತೆ ಗೆಲ್ಲಬಹುದು ಎಂದು ಕನಸು ಕಂಡಿರುವ ಯೋಗೇಶ್ವರ್ಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.ಮಂಡ್ಯ ಜಿಲ್ಲಾ ಉಸ್ತುವಾರಿ ಅಧಿಕಾರ ವಹಿಸಿಕೊಂಡ ದಿನವೇ ಆ ಜಿಲ್ಲೆಯ ತಹಸೀಲ್ದಾರ್ಗಳಿಗೆ ೨ ಲಕ್ಷ ರೂ. ನೀಡುವಂತೆ ಧಮಕಿ ಹಾಕಿರುವ ಘಟನೆಯೂ ನನ್ನ ಗಮನಕ್ಕೆ ಬಂದಿದೆ. ಸಚಿವರಾದ ಕೂಡಲೇ ಹಣ ಗಳಿಕೆಯೇ ಇವರ ಮೂಲ ಉದ್ದೇಶವಾಗಿದೆ. ರಾಮನಗರ ಜಿಲ್ಲೆಯಲ್ಲಿಯೂ ಸಹ ಅಧಿಕಾರಿಗಳ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ಯೋಗೇಶ್ವರ್ ಕಿರುಕುಳ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.ಪ್ರತಿಭಟನೆಯ ಎಚ್ಚರಿಕೆ: ತಾಲೂಕಿನಾದ್ಯಂತ ೧೫ ಸಾವಿರಕ್ಕೂ ಹೆಚ್ಚು ಅರ್ಹ ಫಲಾನುಭವಿಗಳ ಮಾಸಾಶನ, ವೃದ್ಧಾಪ್ಯ ವೇತನ ಮುಂತಾದವುಗಳನ್ನು ರದ್ದು ಮಾಡಿರುವುದು ಖಂಡನೀಯ. ಈ ವಿಚಾರದಲ್ಲಿ ಮುಂದಿನ ೧೫ ದಿನಗಳಲ್ಲಿ ಸಮಸ್ಯೆ ಸರಿಪಡಿಸದಿದ್ದರೆ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.ಹೆಚ್ಡಿಕೆ ಯುವ ಸೇನೆಯ ಪದಾಧಿಕಾರಿಗಳು ತಾಲೂಕಿನ ಸಮಸ್ಯೆಗಳತ್ತ ಹೆಚ್ಚು ಗಮನ ನೀಡಿ ನೊಂದವರ ಬಾಳಿಗೆ ಬೆಳಕಾಗಿ ಎಂದು ಕಿವಿ ಮಾತು ಹೇಳಿದರು.ಮಧುಗಿರಿ ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ಹೆಚ್ಡಿಕೆ ಯುವಸೇನೆಯ ಪದಾಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಅದನ್ನ ಸಮರ್ಪಕವಾಗಿ ನಿಭಾಯಿಸುವುದರ ಜೊತೆಗೆ ಬಡವರಿಗೆ ಅನೂಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್.ಡಿ.ಕುಮಾರಸ್ವಾಮಿಗೆ ಕಪ್ಪುಚುಕ್ಕೆ ಬರದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ವಿವಿದ ಕ್ಷೇತ್ರಗಳ ಗಣ್ಯರನ್ನು ಸೇನೆಯ ವತಿಯಿಂದ ಸನ್ಮಾನಿಸಲಾಯಿತು. ಸೇನೆಯ ಗೌರವ ಅಧ್ಯಕ್ಷ ಸಿಂ.ಲಿಂ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಮರಿಲೀಂಗೆಗೌಡ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ರಾಜಣ್ಣ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನೇಗೌಡ, ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ರೇಖಾ ಉಮಾಶಂಕರ್, ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ವಿಶಾಲ್ಗೌಡ, ಸೇನೆ ಅಧ್ಯಕ್ಷ ಸುಣ್ಣಘಟ್ಟ ಅಶ್ವಥ್ಕುಮಾರ್,ಕೆ.ಪಿ. ರವೀಶ್, ಕೋಡಂಬಳ್ಳಿ ಸ್ವಾಮಿ, ಕೆ.ಸಿ.ರಾಜೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕಳ್ಳ ಲೆಕ್ಕ ಕೂಟ್ಟರೆ ಪಾಖಂಡಿಗಳು

 ಬರ ನಿರ್ವಹಣಾ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ತಾಲೂಕಿನಾದ್ಯಂತ ಕೊರೆದಿರುವ ೧೭೦ ಕೊಳವೆ ಬಾವಿಗಳ ಪೈಕಿ ಸುಮಾರು ೭೦ ಕೊಳವೆ ಬಾವಿಗಳು ವಿಫಲವಾಗಿವೆ. ಬರ ನಿರ್ವಹಣಾ ಪರಿಸ್ಥಿತಿ ಪರಿಶೀಲನೆಗೆಂದು ಇತ್ತೀಚಿಗೆ ನಗರಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿಗಳ ಬಳಿ ಅಧಿಕಾರಿಗಳು ಶೇ. ೯೦ ಕೊಳವೆ ಬಾವಿಗಳು ಯಶಸ್ವಿಯಾಗಿವೆ ಎಂದು ಸುಳ್ಳು ಹೇಳಿರುವ ಬಗ್ಗೆ ಅಧಿಕಾರಿಗಳನ್ನು ಶಾಸಕ ಕೆ.ರಾಜು ತರಾಟೆಗೆ ತೆಗೆದುಕೊಂಡರು.ನಗರಸಭೆಯ ಪ್ರಶಸ್ತಿ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿಗಳ ಬಳಿ ಸುಳ್ಳಿನ ಸರಮಾಲೆ ಹೆಣೆದ ನಂತರ ಪರಿಶೀಲಿಸಲಾಗಿ ಸತ್ಯ ಹೊರಬಿದ್ದಿದೆ ಎಂದು ಸಭೆಯಲ್ಲಿ ಹಾಜರಿದ್ದ ಇಂಜನಿಯರಿಂಗ್ ವಿಭಾಗದ ಎಇಇ ಶ್ರೀನಿವಾಸ್ ವಿರುದ್ಧ ಹರಿಹಾಯ್ದರು.ಅರ್ಧ ಇಂಚು ನೀರು ಬಿದ್ದಿರುವ ಕೊಳವೆ ಬಾವಿಗಳನ್ನು ಯಶಸ್ವಿ ಎಂದು ಹೇಗೆ ಒಪ್ಪಿಕೊಂಡಿರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಅವರು, ೫ ಹೆಚ್ಪಿ ಸಾಮರ್ಥ್ಯದ ಪಂಪ್ಗಿಂತ ಕಡಿಮೆ ಸಾಮರ್ಥ್ಯದ ಮೋಟರ್ ಕೊಳವೆ ಬಾವಿಯನ್ನು ಯಶಸ್ವಿ ಎನ್ನಲಾಗುವುದಿಲ್ಲ. ೧೭೦ ಕೊಳವೆ ಬಾವಿಗಳನ್ನು ಯಾವ್ಯಾವ ಅನುದಾನದಲ್ಲಿ ಕೊರೆದಿದ್ದೀರಿ ಎಂದು ಶಾಸಕರು ಕೇಳಿದ ಮಾಹಿತಿಗೆ ಎಇಇ ಶ್ರೀನಿವಾಸ್ರ ಬಳಿ ಮಾಹಿತಿ ಇರಲಿಲ್ಲ.
ನಿರ್ಮಿತಿ ಕೇಂದ್ರದಿಂದ ಕಳೆಪೆ ಕಾಮಗಾರಿ:
ತಾಲೂಕು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಅಧಿಕಾರಿ ಪುಟ್ಟಲಿಂಗಯ್ಯ ಮಾತನಾಡಿ, ಸರ್ಕಾರ ತಾಲೂಕಿನಲ್ಲಿ ೪೦ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ನೀಡಿದೆ. ಆದರೆ ಈ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಮೂಲಕ ಮಾಡಿಸಲು ಸೂಚನೆ ಇದೆ. ನಿರ್ಮಿತಿ ಕೇಂದ್ರದ ಕಾಮಗಾರಿಗಳು ಗುಣಮಟ್ಟದ್ದಾಗಿರುವುದಿಲ್ಲ. ಹೀಗಾಗಿ ಬೇರೆ ನಿರ್ಮಾಣ ಏಜೆನ್ಸಿಗೆ ವಹಿಸಿಕೊಡಿ ಎಂದು ಶಾಸಕರಿಗೆ ಮನವಿ ಮಾಡಿದರು.ನಿರ್ಮಿತಿ ಕೇಂದ್ರದ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ತಾಲ್ಲೂಕು ಆಡಳಿತಕ್ಕೆ ನೆಮ್ಮದಿ ಕೇಂದ್ರಗಳು:
ಸರ್ವೆ ಇಲಾಖೆಯ ಸಿಬ್ಬಂದಿ ಸರ್ವೆ ಕೆಲಸವನ್ನು ತೀರಾ ನಿಧಾನ ಮಾಡಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ ಏಕೆ ಎಂದು ಶಾಸಕರು ಸಭೆಯಲ್ಲಿ ಹಾಜರಿದ್ದ ತಹಸಿಲ್ದಾರ್ ರವಿ ಎಂ. ತಿರ್ಲಾಪೂರ ಅವರನ್ನು ಪ್ರಶ್ನಿಸಿದರು. ಮಂಜೂರಾಗಿರುವ ೧೦ ಸರ್ವೆಯರ್ಗಳ ಹುದ್ದೆಯ ಪೈಕಿ ಕೇವಲ ೪ ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ವಿಳಂಬವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಸೆಪ್ಟಂಬರ್ ಅಂತ್ಯದ ವೇಳೆಗೆ ನೆಮ್ಮದಿ ಕೇಂದ್ರಗಳನ್ನು ತಾಲೂಕು ಆಡಳಿತವೇ ನಿರ್ವಹಿಸಲಿದೆ. ಹೀಗಾಗಿ ನೆಮ್ಮದಿ ಕೇಂದ್ರಗಳಿಗೆ ಬೇಕಾಗುವ ಸೌಲಭ್ಯಗಳನ್ನು ಹೋಬಳಿ ಮಟ್ಟದಲ್ಲಿ ಕಲ್ಪಿಸಲಾಗುತ್ತಿದೆ ಎಂದು ತಹಸಿಲ್ದಾರ್ ತಿಳಿಸಿದರು.
ಗೈರಾದ ಅಧಿಕಾರಿ ವಿರುದ್ದ ಶಿಸ್ತು ಕ್ರಮ:
ಸಭೆಯಲ್ಲಿ ಅನುಮತಿ ಇಲ್ಲದೆ ಗೈರಾಗಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ವಿರುದ್ಧ ಕಿಡಿ ಕಾರಿದ ಶಾಸಕರು, ಇವರು ಯಾವ ಸಭೆಗೂ ಹಾಜರಾಗುತ್ತಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುವ ನಿರ್ಣಯ ದಾಖಲಿಸಿದರು. ಅಲ್ಲದೇ ಇಲಾಖೆಗಳ ಮಾಹಿತಿ ನೀಡದ ಅಧಿಕಾರಿಗಳು ಶಾಸಕರ ಆಕ್ರೋಶಕ್ಕೆ ಗುರಿಯಾದರು.
ನೋ ಸ್ಟಾಕ್ ಯೂರಿಯಾ:
ಅತಿಯಾದ ಯೂರಿಯಾ ಬಳಕೆಯಿಂದ ಮಣ್ಣಿನ ಸಾಮರ್ಥ್ಯ ಕುಗ್ಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಯೂರಿಯಾ ಪೂರೈಕೆಯ ಬಗ್ಗೆ ವಿಳಂಬ ಧೋರಣೆ ತೊರುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಶಾಸಕರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಯೂರಿಯಾದ ಅತಿಯಾದ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ರೈತರಿಗೆ ಪೂರ್ವ ಮಾಹಿತಿಯನ್ನೇ ಬಿತ್ತನೆ ಸಮಯದಲ್ಲಿ ಕೊಡುವುದು ಸರಿಯಲ್ಲ. ಯೂರಿಯಾ ದಾಸ್ತಾನು ಮಾಡುವಂತೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.ನಗರದಾದ್ಯಂತ ಕಸ ವಿಲೇವಾರಿಯ ಬಗ್ಗೆ ಕೇಳಿ ಬರುತ್ತಿರುವ ದೂರುಗಳನ್ನು ಪ್ರಸ್ತಾಪಿಸಿದ ಶಾಸಕರು ತಾವೇ ನಗರದಾದ್ಯಂತ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಸಭೆಯಲ್ಲಿ ಹಾಜರಿದ್ದಿ ನಗರಸಭೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಹಿಪ್ಪುನೇರಳೆ ಬೇಸಾಯ ಶೇ.೩೭ ಕಡಿಮೆಯಾಗಿದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.ಉಪನೋಂದಣಾಧಿಕಾರಿಗಳು ಮಾತನಾಡಿ, ೨೦೧೧-೧೨ನೇ ಸಾಲಿನಲ್ಲಿ ಸರ್ಕಾರ ನೀಡಿದ್ದ ೩೦ ಕೋಟಿ ಗುರಿಯನ್ನು ಸಾಧಿಸಿರುವುದಾಗಿ ಹಾಗೂ ಪ್ರಸಕ್ತ ಸಾಲಿಗೆ ಸರ್ಕಾರ ೩೨ ಕೋಟಿ ರೂ. ಗುರಿ ನೀಡಿದ್ದು, ಈಗಾಗಲೆ ೧೬ ಕೋಟಿ ರೂ. ಗಳ ಸಾಧನೆಯಾಗಿದೆ ಎಂದರು.ಸಭೆಯಲ್ಲಿ ತಾಪಂ ಅಧ್ಯಕ್ಷೆ ಬಾನುಮತಿ, ಉಪಾಧ್ಯಕ್ಷೆ ಶೋಭಾ, ಇಓ ನಾರಾಯಣಸ್ವಾಮಿ, ತಹಸಿಲ್ದಾರ್ ರವಿ ಎಂ. ತಿರ್ಲಾಪೂರ ಇತರರು ಹಾಜರಿದ್ದರು.

ಕಲುಷಿತ ಆಹಾರ ಸೇವಿಸಿ ೩೭ ಮಕ್ಕಳು ಅಸ್ವಸ್ಥ

ನಗರದ ಐಜೂರು ಕೆಂಪೇಗೌಡ ವೃತ್ತದ ಬಳಿಯಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿದ ಪರಿಣಾಮ ೩೭ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.ಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ ೩೭ ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿಯಿಂದ ಬಳಲಿ ತೀವ್ರ ಅಸ್ವಸ್ಥಗೊಂಡರು. ಆದರೆ ಶಾಲೆಯ ವಾರ್ಡನ್ ಆಗಲಿ ಶಿಕ್ಷಕರಾಗಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸುವ ಗೋಜಿಗೆ ಹೋಗಲಿಲ್ಲ. ವಿಷಯ ತಿಳಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರ ನೆರವಿನೊಂದಿಗೆ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನರಸಿಂಹ ಮತ್ತು ಸಿಬ್ಬಂದಿ ತಕ್ಷಣ ಚಿಕಿತ್ಸೆ ಆರಂಭಿಸಿದ್ದರಿಂದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.ಅಸ್ವಸ್ಥಗೊಂಡ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆ ಸಿಬ್ಬಂದಿ ಚಿಕಿತ್ಸೆ ಕೊಡಿಸದೆ ನೀರು ಕುಡಿದು ಸ್ಪಲ್ಪ ಹೊತ್ತು ಮಲಗಿ ಸರಿಹೋಗುತ್ತೆ ಎಂದು ಎಲ್ಲಾ ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ವಿಷಯ ತಿಳಿದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೇಬಲ್ ರಾಜು, ಅನಿಲ್, ಹೇಮಂತ್, ಜೋಗಿಂದರ್ ಇತರರು ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸಂಜೆ ವೇಳೆಗೆ ಚೇತರಿಸಿಕೊಂಡ ವಿದ್ಯಾರ್ಥಿಗಳನ್ನು ವಾಪಸ್ಸು ಶಾಲೆಗೆ ಕಳುಹಿಸಲಾಗಿದೆ. ನಾಲ್ಕೈದು ವಿದ್ಯಾರ್ಥಿಗಳು ಜ್ವರದಿಂದ ಬಳಲುತ್ತಿದ್ದು, ಇವರಿಗೆ ಇನ್ನು ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ಶಾಸಕ ಕೆ.ರಾಜು, ನಗರಸಭಾ ಅಧ್ಯಕ್ಷ ಸಾಬಾನ್ ಸಾಬ್, ತಾಪಂ ಅಧ್ಯಕ್ಷೆ ಭಾನುಮತಿ, ಮರಿದೇವರು ಇತರರು ಭೇಟಿ ನೀಡಿ ಪರಶೀಲಿಸಿದರು.ಕ್ರಮ ಕೈಗೊಳ್ಳಲು ಶಾಸಕ ಸೂಚನೆಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ರಾಜು ತಿಳಿಸಿದರು. ಘಟನೆ ಹಿನ್ನೆಲೆಯಲ್ಲಿ ನಗರದ ಪರಿವೀಕ್ಷಣಾ ಮಂದಿರದಲ್ಲಿ ಕರೆದಿದ್ದ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರು, ವಾರ್ಡ್ನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯನ್ನುದ್ದೇಶಿ ಮಾತನಾಡಿದರು. ಮಕ್ಕಳು ಸೇವಿಸಿ ಅಸ್ವಸ್ಥಗೊಂಡ ಆಹಾರವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕೊಡಲಾಗಿದೆ. ಬೆಂಗಳೂರಿನ ಪ್ರಯೋಗ ಶಾಲೆಯಲ್ಲಿ ಆಹಾರ ಕಳಪೆಯ ಬಗ್ಗೆ ವರದಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಬರೆಯುವುದಾಗಿ ತಿಳಿಸಿದರು.

ಗ್ರಾಮೀಣ ಜನರ ದೂರು ಸ್ವೀಕರಿಸಲು ಕಂಟ್ರೋಲ್ ರೂಂ

 ಗ್ರಾಮೀಣ ಜನರು ಜಿಪಂ ವ್ಯಾಪ್ತಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ನೇರವಾಗಿ ಜಿಪಂ ಗಮನಕ್ಕೆ ತರಲು ಅನುಕೂಲವಾಗುವಂತೆ ಪಂಚಾಯತ್ ಭವನದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ಸಿಬ್ಬಂದಿಗಳನ್ನು ನೇಮಿಸುವಂತೆ ಜಿಪಂ ಅಧ್ಯಕ್ಷೆ ಬಿ.ವಿ.ಹಂಸಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಲ್.ಚಂದ್ರು ಮಾತನಾಡಿ, ರಾಮನಗರ ತಾಲೂಕಿನ ಬಿಡದಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಸುಗ್ಗನಹಳ್ಳಿ ಆರೋಗ್ಯ ಕೇಂದ್ರದ ನಿರ್ವಹಣೆಯನ್ನು ಕರುಣಾ ಟ್ರಸ್ಟ್ಗೆ ವಹಿಸಿದ್ದು, ಟ್ರಸ್ಟ್ ಒಪ್ಪಂದದ ನಿಯಮ ಉಲ್ಲಂ ಸಿರುವುದರಿಂದ ಟ್ರಸ್ಟ್ನ ಕರಾರನ್ನು ರದ್ದುಪಡಿಸುವಂತೆ ಸದಸ್ಯ ಧನಂಜಯ ಒತ್ತಾಯಿಸಿ ಸಂಸ್ಥೆಗೆ ವೇತನ ಹಾಗೂ ನಿರ್ವಹಣಾ ವೆಚ್ಚ ನೀಡುತ್ತಿರುವುದು ಸರಿಯಲ್ಲ ಎಂದರು. ಇದಕ್ಕೆ ಸ್ಪಂದಿಸಿದ ಸಿಇಓ ಟ್ರಸ್ಟ್ನ ಕರಾರು ಒಪ್ಪಂದ ರದ್ದು ಪಡಿಸಿ ಆರೋಗ್ಯ ಕೇಂದ್ರದ ನಿರ್ವಹಣೆಯನ್ನು ಇಲಾಖೆಗೆ ವಹಿಸಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಬದಲಿ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಹಾಗೂ ಕರ್ತವ್ಯ ಉಲ್ಲಂ ಸಿರುವ ಬಿಡದಿ ಆಸ್ಪತ್ರೆಯ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಚಂದ್ರು ಆಗ್ರಹಿಸಿದರು.

ರುದ್ರ ಭೂಮಿಗಾಗಿ ಅಲೆದಾಟ

ಸ್ಮಶಾನ ಸ್ಥಳ ಮಂಜೂರು ಮಾಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ತಾಲೂಕಿನ ಪೇಟೆ ಕುರುಬರಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಕಂದಾಯ ಭವನದ ಮುಂಭಾಗ ಶವವಿಟ್ಟು ಪ್ರತಿಭಟಿಸಿದ ಪ್ರಸಂಗ ನಗರದಲ್ಲಿ ನಡೆಯಿತು.ಶುಕ್ರವಾರ ಬೆಳಿಗ್ಗೆ ರಸ್ತೆ ಆಪಘಾತದಲ್ಲಿ ಮೃತಪಟ್ಟ ಗ್ರಾಮದ ಯುವಕ ಮುತ್ತುರಾಜ್(೨೨) ಶವವನ್ನು ಇಟ್ಟು ಪ್ರತಿಭಟಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.ಸುದ್ದಿಗಾರರೊಂದಿಗೆ ನೋವು ತೋಡಿಕೊಂಡ ಗ್ರಾಮದ ಮುಖಂಡ ಕೆ.ಎಸ್.ದೊಡ್ಡವೆಂಕಟಯ್ಯ ತಮ್ಮ ಗ್ರಾಮದಲ್ಲಿ ೩೦೦ ಕುಟುಂಬಗಳಿವೆ. ಯಾರಾದರೂ ಸಾವನ್ನಪ್ಪಿದರೆ ಶವವನ್ನು ಹೂಳಲು ಇತರರ ಜಮೀನುಗಳ ಮಾಲೀಕರ ಮೊರೆಹೋಗಬೇಕಾಗಿದೆ. ಒಂದು ವೇಳೆ ಭೂಮಿ ಮಾಲೀಕರು ಅನುಮತಿ ನಿರಾಕರಿಸಿದರೆ ಶವಗಳನ್ನು ಎಲ್ಲಿ ಹೂಳಬೇಕು ಎಂದು ವೆಂಕಟಯ್ಯ ಪ್ರಶ್ನಿಸಿದರು.ತಮ್ಮ ಬೇಡಿಕೆಯ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಸ್ಮಶಾನಕ್ಕೆ ಸ್ಥಳ ಒದಗಿಸುವುದು ಸೇರಿದಂತೆ ಅಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಅವರು ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಇಡೀ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ನಗರಸಭಾ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ ಪೇಟೆ ಕುರುಬರಹಳ್ಳಿಯಲ್ಲಿ ಸುಮಾರು ೭೫ ದಲಿತ ಪರಿಶಿಷ್ಟ ಕುಟುಂಬಗಳಿವೆ. ಸ್ವಾತಂತ್ರ್ಯ ಬಂದು ೬೬ ವರ್ಷಗಳು ಕಳೆದರೂ ಅನೇಕ ಹಳ್ಳಿಗಳಲ್ಲಿ ದಲಿತರಿಗೆ ರುದ್ರಭೂಮಿ ಮಂಜೂರಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿ.ಶ್ರೀರಾಮ ರೆಡ್ಡಿ ಅತಿ ಶೀಘ್ರದಲ್ಲಿ ಬೇಡಿಕೆಯ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂತೆಗೆದು ಕೊಂಡರು.ಪ್ರತಿಭಟನೆಯಲ್ಲಿ ಬಿಳಗುಂಬ ಕ್ಷೇತ್ರದ ತಾಪಂ ಸದಸ್ಯ ಸಿದ್ದಲಿಂಗೇಗೌಡ(ಪ್ರಾಣೇಶ್), ತಾಲೂಕು ಎಸ್ಸಿ ಎಸ್ಟಿ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಜೀವನ್ಪ್ರಕಾಶ್, ಛಲವಾದಿ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಶ್ರೀಧರ್ ಮುಖಂಡರುಗಳಾದ ಲೋಕೇಶ್, ಶಿವಕುಮಾರ್, ಸಿದ್ದರಾಜು, ಜಯರಾಮ, ವೆಂಕಟೇಶ, ಚಂದ್ರಶೇಖರ್, ಪುಟ್ಟಸ್ವಾಮಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಸಭಾ ಭವನಕ್ಕೆ ಬೀಗ ಆಯುಕ್ತರಿಗೆ ದಿಗ್ಬಂದನ

 ನಗರಸಭಾ ಸದಸ್ಯರಿಗೆ ಅಗೌರವ ತೋರಿರುವುದು ಸೇರಿದಂತೆ ನಗರದಲ್ಲಿನ ಸ್ವತ್ಛತೆ ಕಾಪಾಡುವಲ್ಲಿ ಕರ್ತವ್ಯ ಲೋಪ ಎಸಗಿರುವ ಪರಿಸರ ನೈರ್ಮನ್ಯ ಇಂಜಿನಿಯರ್ ಅರ್ಚನಾರನ್ನು ಅಮಾನತ್ತುಗೊಳಿಸಬೇಕು ಎಂದು ಪೌರಾಡಳಿತ ಇಲಾಖೆಗೆ ಪತ್ರ ಬರೆಯಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ನಗರದ ಪ್ರಶಸ್ತಿ ಭವನದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳಾದ ಎಸ್.ರವಿ, ಮುಕುಂದರಾಜ್, ಸಾವಿತ್ರಮ್ಮ, ಸಿಂಧೂ ವಾಯ್ಕರ್, ರತ್ನ ಮುಂತಾದವರು ಪರಿಸರ ಅಧಿಕಾರಿಯ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದನ್ನು ಖಂಡಿಸಿದರು. ಸಭೆಯಲ್ಲಿ ಹಾಜರಿದ್ದ ಅಧಿಕಾರಿ ಅರ್ಚನಾ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸದಸ್ಯರ ಆಕ್ರೋಶಕ್ಕೆ ಗುರಿಯಾದರು. ಬಿಸಿ ಬಿಸಿ ಚರ್ಚೆಯನಂತರ ನಿರ್ಣಯ ಕೈಗೊಳ್ಳಲಾಯಿತು.
ನಗರಸಭೆಯ ಸ್ಥಾಯಿ ಸಮಿತಿ ರಚನೆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆಗೆ ತರುವುದಾಗಿ ಅಧ್ಯಕ್ಷ ಸಾಬಾನ್ ಸಾಬ್ ಹೇಳಿದರು. ಗ್ರಾ.ಪಂ.ಗಳಿಗೆ ಒಳಚರಂಡಿಗೆ ಬಳಸುವ ಸಕ್ಕಿಂಗ್ ಮೆಷಿನ್ಗಳಿಗೆ ಬಾಡಿಗೆ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಬಿ. ಉಮೇಶ್, ಆಯುಕ್ತ ಚಿದಾನಂದ ಉಪಸ್ಥಿತರಿದ್ದರು.ಪ್ರತಿಪಕ್ಷ ಸದಸ್ಯರಿಂದ ಸಭಾ ಭವನಕ್ಕೆ ಬೀಗ:ನಗರಸಭೆಯ ಸಾಮಾನ್ಯ ಸಭೆ ನಿಗಧಿತ ಸಮಯಕ್ಕೆ ಆರಂಭವಾಗದಿರುವುದನ್ನು ಖಂಡಿಸಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಸಭಾ ಭವನಕ್ಕೆ ಬೀಗ ಜಡಿದು, ಆಯುಕ್ತರಿಗೆ ದಿಗ್ಬಂದನ ಹೇರಿದ ಪ್ರಸಂಗ ನಡೆಯಿತು.ನಗರಸಭೆಯ ಪ್ರಶಸ್ತಿ ಭವನದಲ್ಲಿ ಶನಿವಾರ ೧೧ಗಂಟೆಗೆ ನಡೆಯಬೇಕಾಗಿದ್ದ ಸಭೆ ಒಂದು ಗಂಟೆ ತಡವಾಗಿ ಆರಂಭವಾಗಿದ್ದರಿಂದ ಆಕ್ರೋಶಗೊಂಡ ಪ್ರತಿಪಕ್ಷಗಳ ಸದಸ್ಯರು ಪ್ರಶಸ್ತಿ ಭವನದ ಸಭಾಂಗಣಕ್ಕೆ ಬೀಗ ಜಡಿದರು. ಸಭಾಂಗಣದಲ್ಲಿ ಆಯುಕ್ತ ಚಿದಾನಂದ ಮತ್ತು ಇತರ ಅಧಿಕಾರಿಗಳು ಹಾಜರಿದ್ದರೂ ಲೆಕ್ಕಿಸದೆ ಬೀಗ ಜಡಿದು ಆಯುಕ್ತರಿಗೆ ದಿಗ್ಬಂದನ ಹಾಕಿ ಪ್ರತಿಭಟನೆ ನಡೆಸಿದರು.ಅಧ್ಯಕ್ಷ ಸಾಬಾನ್ ಸಾಬ್, ಉಪಾಧ್ಯಕ್ಷ ಬಿ. ಉಮೇಶ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ೧೨ಗಂಟೆಗೆ ಆಗಮಿಸಿದನ್ನು ಕಂಡ ಸದಸ್ಯರು ಆಕ್ರೋಶವ್ಯಕ್ತಪಡಿಸಿದರು.ನಂತರ ಬೀಗವನ್ನು ತೆರವುಗೊಳಿಸಿ ಸಭೆಯನ್ನು ಆರಂಭಿಸಿದರು.ಸದಸ್ಯರುಗಳಾದ ಶಿವಕುಮಾರಸ್ವಾಮಿ, ದೊಡ್ಡಿ ಸುರೇಶ್, ಬಿ. ನಾಗೇಶ್, ಆರಿಫ್ ಖುರೇಷಿ, ಬಾಬು ಸೇs?, ಸೈಯದ್ ಉಮ್ಮರ್, ನಿಜಾಂ, ಸಯಿದಾ ಬಾನು, ನೋಂದಾಯಿತ ಸದಸ್ಯರುಗಳಾದ ಡಾ.ಕೆ.ಪಿ. ಹೆಗ್ಡೆ, ಸೋಮಶೇಖರ್, ಗೋಪಾಲ್, ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾರನ್ನು ಭೇಟಿ ಮಾಡಿ ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷಗಳ ಸದಸ್ಯರನ್ನು ಅವಮಾನಿಸಿದ್ದಾರೆ. ಹೀಗಾಗಿ ಇಂದು ನಡೆದಿರುವ ಸಭೆಯನ್ನು ಅನೂರ್ಜಿತಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಅರ್ಪಿಸಿದರು.

ರೈತರ ಹಿತ ಕಡೆಗಣಿಸಿದರೆ ಉಗ್ರ ಹೋರಾಟ

 ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನ ಮಂತ್ರಿಗಳ ಅವೈಜಾಟಿನಿಕ ಮತ್ತು ಅವಾಸ್ತವಿಕ ತೀರ್ಮಾನವನ್ನು ವಿರೋಧಿಸಿ ರೈತಸಂಘ ಪ್ರತಿಭಟನೆ ನಡೆಸಿತು.ನಗರದ ಎಪಿಎಂಸಿ ಮಾರುಕಟ್ಟೆಯಿಂದ ಕಂದಾಯ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಅಲ್ಲಿಯೇ ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರಾಮು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡುವ ಮುನ್ನ ನಿವೃತ್ತ ನ್ಯಾಯಾಧೀಶರ ಮೂಲಕ ಎರಡೂ ರಾಜ್ಯಗಳಲ್ಲಿನ ಕೃಷಿ ವಿಧಾನ, ಮಳೆ ಪ್ರಮಾಣ, ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಸಂಗ್ರಹ ಮುಂತಾದ ಅಗತ್ಯ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅಧ್ಯಯನ ಮಾಡಿ ನಂತರ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಎರಡೂ ರಾಜ್ಯಗಳಲ್ಲಿನ ವಾಸ್ತವಾಂಶಗಳ ಬಗ್ಗೆ ಅನ್ಯರಾಜ್ಯಗಳ ಕೃಷಿತಜ್ಞರ ಮೂಲಕ ಅಧ್ಯಯನ ನಡೆಸಿ ವರದಿ ತರೆಸಿಕೊಂಡು ರಾಜ್ಯಕ್ಕೆ ಹಾಗಿರುವ ಆನ್ಯಾಯವನ್ನು ಸರಿದೂರಿಗಿಸುವಂತೆ ಒತ್ತಾಯಿಸಿದರು.ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಒಳಹರಿವು ಕಡಿಮೆಯಾಗಿದ್ದು ಇತ್ತ ಮಳೆಯೂ ಹಾಗದೇ ರೈತರು ಕಂಗಾಲಾಗಿದ್ದಾರೆ ಹೀಗಿದ್ದರೂ ರಾಜ್ಯದ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಬೀಡುವುದು ಅಸಾಧ್ಯ. ಒಂದುವೇಳೆ ರಾಜ್ಯದ ರೈತರ ಹಿತವನ್ನು ಕಡೆಗಣಿಸಿದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡರುಗಳಾದ ಕೆ.ಮಲ್ಲಯ್ಯ, ಸಂಪತ್ ಕುಮಾರ್,ಲಕ್ಷ್ಮಣಸ್ವಾಮಿ, ಗೋವಿಂದಪ್ಪ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಮಹಿಳಾ ಘಟಕದಿಂದಲೂ ಪ್ರತಿಭಟನೆ:
ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಪದಾಧಿಕಾರಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬರದಿಂದಾಗಿ ರಾಜ್ಯದ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಕಂಡು ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ಕೇಂದ್ರ ಸರ್ಕಾರದ ಧೋರಣೆ ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯಮ್ಮ, ಸದಸ್ಯರಾದ ಮಂಗಳಗೌರಮ್ಮ, ರೋಹಿಣಿ, ಭಾಗ್ಯಮ್ಮ, ಲಕ್ಷ್ಮೀ, ಮಾನಸ, ಸರಸ್ವತಮ್ಮ ಮುಂತಾದವರು ಭಾಗವಹಿಸಿದ್ದರು.

ಪಶುವೈದ್ಯರ ಗಡುವು

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪುನರ್ ರಚನೆ ಕುರಿತಂತೆ ರಾಜ್ಯಸರ್ಕಾರ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ನೀಡಿದ್ದ ಶಿಫಾರಸು ಜಾರಿಗೊಳಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಶು ವೈದ್ಯರು ಸಮೂಹಿಕ ರಾಜೀನಾಮೆ ನೀಡುವ ಮೂಲಕ ಹೋರಾಟದ ಅಖಾಡಕ್ಕೆ ದುಮಿಕ್ಕಿದ್ದಾರೆ.ಅಲ್ಲದೆ ಅ.೩ರಿಂದ ಸಂಪೂರ್ಣ ಸರ್ಕಾರಿ ಪಶು ವೈದ್ಯರ ಸೇವೆ ಸ್ಥಬ್ದಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.
ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರು, ಸಹ ನಿರ್ದೇಶಕರುಗಳು ಸೇರಿದಂತೆ ಜಿಲ್ಲೆಯ ೫೨ ಪಶು ವೈದ್ಯರು ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.ರಾಜೀನಾಮೆ ಸಲ್ಲಿಕೆಗೂ ಮುನ್ನ ಜಿಲ್ಲಾ ಪಶುಪಾಲನಾ ಕಚೇರಿಯಿಂದ ಕಂದಾಯಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆಲಕಾಲ ಧರಣಿ ನಡೆಸಿದರು.
ತಾಲೂಕು ಸಹಾಯಕ ನಿರ್ದೇಶಕ ಡಾ.ಎಚ್.ಪಿ. ಜಯರಾಂ ಮಾತನಾಡಿ, ಸರ್ಕಾರವೇ ರಚಿಸಿದ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ಪಶುಪಾಲನೆ ಇಲಾಖೆಯನ್ನು ಪುನರ್ ರಚಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ ಸರ್ಕಾರ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯತೋರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಆರೋಗ್ಯ ಇಲಾಖೆ ವೈದ್ಯರಿಗೆ ನೀಡುತ್ತಿರುವ ವೇತನ, ಸಮಯಾವಧಿ, ವೇತನ ಬಡ್ತಿ ಹಾಗೂ ವಿಶೇಷ ಭತ್ಯೆಗಳನ್ನು ನೀಡಬೇಕು. ಅಲ್ಲದೆ ಹೋಬಳಿ ಕೇಂದ್ರಗಳಲ್ಲಿ ಏಕರೂಪ ಮಾದರಿಯ ಪಶು ಆಸ್ಪತ್ರೆ ಸ್ಥಾಪನೆ, ತಾಲೂಕು ಮಟ್ಟದಲ್ಲಿ ಅಗತ್ಯ ಸಿಬ್ಬಂದಿಯೊಂದಿಗೆ ಪತ್ರೆಕ ಆಡಳಿತ ಕಚೇರಿ, ಜಿಲ್ಲಾ ಮಟ್ಟದಲ್ಲಿ ಪಾಲಿಕ್ಲಿನಿಕ್ ಸ್ಥಾಪನೆ, ವಿಷಯ ತಜ್ಞ ಹಾಗೂ ಜಂಟಿ ನಿರ್ದೇಶಕರ ಹುದ್ದೆಯನ್ನೂ ಸರ್ಕಾರ ಸೃಷ್ಟಿಸಬೇಕೆಂದು ಒತ್ತಾಯಿಸಿದರು. ಸೆ. ೧೧ ರಿಂದ ನಾವು ಲೇಖನಿ ಸ್ಥಗಿತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು ಆದರೂ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಬಿಡದಿದ್ದರಿಂದ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಶಪಾಲನಾ ಇಲಾಖೆಯ ಉಪನಿರ್ದೇಶಕ ಎಸ್.ಟಿ. ರಾಥೋಡ್, ಸಹಾಯಕ ಉಪನಿರ್ದೇಶಕರುಗಳಾದ ಡಾ.ಸಿ. ರಾಜಶೇಖರ್, ಡಾ.ವಿ. ಗುರುವಯ್ಯ, ವೈದ್ಯಾಧಿಕಾರಿಗಳಾದ ಡಾ.ಎಸ್. ಲಿಂಗರಾಜಯ್ಯ, ಡಾ.ಎಸ್. ಮೀನಾ, ಡಾ. ವಿಶ್ವನಾಥ್, ಡಾ.ಯು.ಸಿ. ಕುಮಾರ್, ಡಾ. ಕೃಷ್ಣಮೂರ್ತಿ, ಡಾ.ಸಿ.ಆರ್. ಸುನಿಲ್, ಡಾ. ಪುಟ್ಟಸ್ವಾಮಿ, ಡಾ. ಲಕ್ಷಿಱ್ಪಕಾಂತ, ಡಾ. ಅಸದುಲ್ಲಾ ಷರೀಫ್ ಮುಂತಾದವರು ಭಾಗವಹಿಸಿದ್ದರು.

Thursday, 27 September 2012

ಕಂದಾಯ ವಸೂಲಿ

ಮಾಗಡಿ ತಾಲೂಕಿನಲ್ಲಿ ಬರವಿರುವುದರಿಂದ ರೈತರ ಬಳಿ ಕಂದಾಯ ವಸೂಲಿ ಮಾಡಬೇಡಿ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರೇಣುಕಾಚಾರ್ಯ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಮಾಗಡಿಯ ನಾರಸಂದ್ರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ನಾರಸಂದ್ರ ಮತ್ತು ಮಾದಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಳೆ ಬೆಳೆ ಬಂದಾಗ ರೈತರೇ ತಮ್ಮ ಕಂದಾಯವನ್ನು ಕಟ್ಟುತ್ತಾರೆ. ಹಳ್ಳಿಯಲ್ಲಿ ಬೆಳೆದ ನನಗೆ ರೈತರ ಬವಣೆ ಏನೆಂಬುದು ಚನ್ನಾಗಿ ಗೊತ್ತಿದೆ ಎಂದ ಅವರು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡದೆ ತಮ್ಮ ಸ್ವಂತ ಮನೆಗೆ ಮಾಡಿಕೊಳ್ಳುವಂತೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ. ಈ ತಾಲೂಕಿನಲ್ಲಿ ಉತ್ತಮ ಶಾಸಕರನ್ನು ಪಡೆದಿದ್ದೀರಿ. ಅವರು ಬೇರೆ ಪಕ್ಷದವರಾಗಿದ್ದರೂ, ಉತ್ತಮ ಕೆಲಸ ಮಾಡುತ್ತಿರುವವರ ಬಗ್ಗೆ ಎರಡು ಒಳ್ಳೆಯ ಮಾತನಾಡುವುದು ಮತ್ತು ಅವರಿಗೆ ಸಹಕರಿಸುವುದು ತಪ್ಪಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣಅವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.ಮುಖ್ಯ ಅತಿಥಿಯಾಗಿದ್ದ ರಾಮನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಂಸಕುಮಾರಿ ಮಾತನಾಡಿ, ಬರ ನಿರ್ವಾಹಣೆಗೆ ಸರಕಾರವು ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ರಾಮನಗರ ಜಿಲ್ಲೆಯವರೇ ಆದ ಸಚಿವ ಸಿ.ಪಿ.ಯೋಗೇಶ್ವರ್ ಕಾರ್ಯಕ್ರಮಗಳಿಗೆ ತಪ್ಪಿಸಿಕೊಳ್ಳುತ್ತಿದ್ದರು. ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಅವರ ಕಾರ್ಯವೈಖರಿ ಸಮಾಧಾನ ತಂದಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿರುವ ಗುತ್ತಿಗೆದಾರರಿಗೆ ಇದುವರೆಗೂ ಸರಕಾರದಿಂದ ಹಣ ನೀಡಿಲ್ಲ. ಸರ್ಕಾರ ಇತ್ತ ಗಮನ ಹರಿಸಬೇಕೆಂದರು.ಇದೇ ವೇಳೆ ಸಚಿವ ರೇಣುಕಾಚಾರ್ಯ ಅವರನ್ನು ಸನ್ಮಾನಿಸಲಾಯಿತು.ಕಂಠೀರವ ಸ್ಟುಡಿಯೋ ಅಧ್ಯಕ್ಷ ರುದ್ರೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ಕಾಂತರಾಜ್, ರಾಮನಗರ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ, ವೀರಪ್ಪ, ನಾರಸಂದ್ರ ಗ್ರಾಮಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಶ್ರೀಗಿರಿಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರಕಾಶ್, ರಾಜಣ್ಣ, ಟಿ.ಹನುಮಂತರಾಯಪ್ಪ, ಚಿಕ್ಕಮಸ್ಕಲ್ ಸಿದ್ದಲಿಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉದ್ದೇಶ್, ನಾರಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ಮಾವಿನಮರಗಳ ಮಾರಣಹೋಮ

 ವೈಯುಕ್ತಿಕ ದ್ವೇಷಕ್ಕೆ ಫಸಲಿಗೆ ಬಂದಿದ್ದ ೬೦ ಮಾವಿನ ಮರಗಳ ಮಾರಣ ಹೋಮ ನಡೆಸಿರುವ ಘಟನೆ ಮಾಗಡಿಯ ಶಿವನಸಂದ್ರದಲ್ಲಿ ನಡೆದಿದೆ. ದಾಯಾದಿಗಳ ಕಲಹವನ್ನ ಬಿಡಿಸಲು ಹೋದ ಗೋವಿಂದಯ್ಯ ಎಂಬುವವರ ಪುತ್ರ ಗಂಗಾಧರ್ ಎಂಬಾತನಿಗೆ ಬಿಯರ್ ಬಾಟಲಿಯಿಂದ ಚುಚ್ಚಿ ಹಲ್ಲೆ ನಡೆಸಿದ ನಾಗರಾಜ್ ಎಂಬಾತನೇ ದ್ವೇಷಕ್ಕೆ ಮರಗಳ ಮಾರಣಹೋಮ ನಡೆಸಿದ್ದಾನೆಂದು ಆರೋಪಿಸಲಾಗಿದೆ.ಪಾನಮತ್ತನಾಗಿ ಹೋಗಿದ್ದ ನಾಗರಾಜ್, ಗೋವಿಂದಯ್ಯನವರ ಮನೆಬಾಗಿಲನ್ನ ಹಾಕಿ ನಂತರ ಮಾವಿನ ಮರಗಳನ್ನ ಕಡಿದು ಹಾಕಿದ್ದಾನೆಂದು ಆರೋಪಿಸಲಾಗಿದೆ.ಗ್ರಾಮದ ನಾಗರಾಜ್ ತನ್ನ ಚಿಕ್ಕಪ್ಪ, ದೊಡ್ಡಪ್ಪರ ಮನೆಯವರೊಂದಿಗೆ ಕಲಹ ಆರಂಭಿಸಿದ್ದ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮದ ಗೋವಿಂದಯ್ಯ ಎಂಬುವವರ ಪುತ್ರ ಗಂಗಾಧರ್ ಎಂಬುವವರು ಜಗಳವನ್ನ ಬಿಡಿಸಿದ್ದಾರೆ.ಈ ಸಂಧರ್ಭದಲ್ಲಿ ಬಿಯರ್ ಬಾಟಲಿಯಿಂದ ಗಂಗಾಧರ್ರವರ ಕೈಗೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ನಂತರ ಈ ಬಗ್ಗೆ ಕುದೂರು ಪೊಲೀಸರಿಗೆ ದೂರು ನೀಡಲು ಗಂಗಾಧರ್ ಹೋಗುತ್ತಿದ್ದಂತೆ, ಇತ್ತ ಪಾನಮತ್ತನಾಗಿದ್ದ ನಾಗರಾಜ್ ಏಕಾಏಕಿ ಗಂಗಾಧರ್ ರವರ ಮನೆಯ ಬಾಗಿಲನ್ನ ಹಾಕಿ ತೋಟದಲ್ಲಿದ್ದ ೬೦ ಮಾವಿನ ಮರಗಳನ್ನ ಕಡಿದು ಹಾಕಿದ್ದಾನೆ ಎಂದು ಗಂಗಾಧರ್ ಕುಟುಂಬದವರು ಆರೋಪಿಸಿದ್ದಾರೆ.ಮಾವಿನ ಮರಗಳಿಂದ ಫಸಲು ಮತ್ತು ಲಾಭವನ್ನ ನಿರೀಕ್ಷಿಸಿದ್ದ ಗೋವಿಂದಯ್ಯನವರ ಕುಟುಂಬಕ್ಕೆ ಈಗ ತಡೆದುಕೊಳ್ಳಲಾಗದ ಹೊಡೆತ ಬಿದ್ದಿದೆ. ದುಷ್ಕೃತ್ಯ ನಡೆಸಿರುವವರ ವಿರುದ್ಧ ಕ್ರಮಕೈಗೊಂಡು ಪರಿಹಾರ ಕಟ್ಟಿಕೊಡಬೇಕೆಂದು ಗಂಗಾಧರ್ ಆಗ್ರಹಿಸಿದ್ದಾರೆ.ಗಂಗಾಧರ್ ಕುಟುಂಬದವರು ನಾಗರಾಜ್ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ, ಇತ್ತ ನಾಗರಾಜ್ ಕೂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Sunday, 23 September 2012

ನಕಲಿ ಡಾಕ್ಟರ್ ಎನ್‌ಕೌಂಟರ್ ವರದಿಗಳು


   ಮೈಸೂರಿನಲ್ಲಿ ನಕಲಿ ನರ್ಸಿಂಗ್ ಹೋಂಗಳಿಗೆ ಬೀಗ
ಮೈಸೂರಿನಲ್ಲಿ ಕೆಲವು ನಕಲಿ ವೈದ್ಯರು ಅಕ್ರಮವಾಗಿ ನಡೆಸುತ್ತಿದ್ದಂತಹ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ಮೂರು ಕ್ಲಿನಿಕ್ ಹಾಗೂ ಒಂದು ಬಯೋಟೆಕ್ ಲ್ಯಾಬ್ಗೆ ಬೀಗ ಮುದ್ರೆ ಹಾಕಿದೆ.ಮೈಸೂರಿನಲ್ಲಿ ಚಿಕಿತ್ಸೆ ನೀಡಲು ಅನರ್ಹರಾಗಿರುವಂತಹ ಕೆಲವು ನಕಲಿ ವೈದ್ಯರು ಅಲ್ಲಲ್ಲಿ ಕ್ಲಿನಿಕ್ಗಳನ್ನು ತೆರದು ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲ್ಯಾಬ್ ಆಪರೇಟರ್, ಕಂಪೌಂಡರ್ಗಳು ಮನೆಯಲ್ಲಿ ವೈದ್ಯರಂತೆ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಂದ ಹಣ ಕೀಳುತ್ತಿರುವ ಬಗ್ಗೆ ಈ ಹಿಂದೆ ಖಾಸಗಿ ವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿತ್ತು.ನಗರದ ಗಲ್ಲಿಗಲ್ಲಿಯಲ್ಲಿ ನಕಲಿ ವೈದ್ಯರು ಕ್ಲಿನಿಕ್ ತೆರದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಜಲ್ಲಾಧಿಕಾರಿ ಹರ್ಷಗುಪ್ತಾ ಅವರ ಬಳಿಗೆ ಹೋಗಿತ್ತು. ಹೀಗಾಗಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನಗರದಲ್ಲಿರುವ ಕೆಲವು ಖಾಸಗಿ ನರ್ಸಿಂಗ್ ಹೋಂಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಮಂಡಳಿಯ ಸದಸ್ಯರು ದಾಳಿ ನಡೆಸಿದ್ದಾರೆ.ಮೈಸೂರಿನ ಉದಯಗಿರಿಯ ಮಹದೇವಪುರ ರಸ್ತೆಯಲ್ಲಿರುವ ಲತಾ ನರ್ಸಿಂಗ್ ಹೋಂ, ತಿಲಕ್ ನಗರದ ಶಾಂತಿ ಕ್ಲಿನಿಕ್, ರಾಜೇಂದ್ರನಗರದಲ್ಲಿ ಡಾ.ನಾಗರಾಜ್ ಎಂಬಾತ ನಡೆಸುತ್ತಿದ್ದ ಕ್ಲಿನಿಕ್ ಹಾಗೂ ಉದಯಗಿರಿಯ ಬಯೋಟೆಕ್ ಲ್ಯಾಬ್ವೊಂದಕ್ಕೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳು ಸೂಕ್ತ ನಿರ್ವಹಣೆ ಇಲ್ಲದೆ ಇರುವುದು ಹಾಗೂ ಕೆಲವು ನರ್ಸಿಂಗ್ ಹೋಂಗಳಲ್ಲಿ ಸ್ತ್ರೀರೋಗ ತಜ್ಞರಲ್ಲದವರು ಹೆರಿಗೆ ಮಾಡಿಸುತ್ತಿದ್ದುದನ್ನು ಕಂಡು ಹೌಹಾರಿದರು. ಅಲ್ಲದೆ ಎರಡೇ ಕೊಠಡಿಯ ನರ್ಸಿಂಗ್ ಹೋಂನಲ್ಲಿ ಆಪರೇಷನ್ ಇನ್ನಿತರ ಎಲ್ಲಾ ಚಿಕಿತ್ಸೆಯನ್ನು ಅಲ್ಲಿಯೇ ನೀಡುತ್ತಿರುವುದನ್ನು ಕಂಡು ಆತಂಕಗೊಂಡರು. ಬಳಿಕ ನಾಲ್ಕು ನರ್ಸಿಂಗ್ ಹೋಂಗಳಿಗೆ ಬೀಗ ಮುದ್ರೆ ಹಾಕಲಾಯಿತು

 ರಾಯಬಾಗದ್ಯಂತ ನಕಲಿ ವೈದ್ಯರಿದ್ದಾರೆ ಹುಷಾರ್...!
ಅರ್ಹತೆ ಇಲ್ಲದಿದ್ದರೂ ವೈದ್ಯರು ಎಂದು ಹೇಳಿಕೊಳ್ಳುವ ನಕಲಿ ಡಾಕ್ಟರ್ಗಳು ರಾಯಬಾಗ ತಾಲೂಕಿನಾದ್ಯಂತ ಜನಸಾಮಾನ್ಯರ ಹಣ ಕಿತ್ತುಕೊಂಡು ಆರೋಗ್ಯ ಹಿಂಡುತ್ತಿದ್ದಾರೆ.ರಾಯಬಾಗ ತಾಲೂಕಿನಾದ್ಯಂತ ಠಿಕಾಣಿ ಹೂಡಿದ ನಕಲಿ ವೈದ್ಯ ಮಹಾಶಯರು, ಆರೋಗ್ಯ ಸೇವೆಯನ್ನು ಹಣ ಸಂಪಾದನೆಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಸಮಾಜ ಘಾತುಕದಲ್ಲಿ ಇವರೂ ಒಬ್ಬರು. ತಾವು ಹೊಟ್ಟೆ ಹೊರೆಯಲು ಬಡವರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ. ಹಳ್ಳಿ, ಕ್ಯಾಂಪ್, ನಗರ ಪ್ರದೇಶಗಳಲ್ಲಿ ೧೫೦ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆಂಬುದು ಮಾಹಿತಿಯಿಂದ ತಿಳಿದು ಬಂದಿದೆ.ಕಡಿಮೆ ಹಣ ಪಡೆದು ಅಲ್ಪಾವಧಿಯಲ್ಲಿ ರೋಗ ಗುಣ ಪಡಿಸುವುದಾದರೆ ಯಾರು ತಾನೇ ನುರಿತ ವೈದ್ಯರಲ್ಲಿ ಹೋಗಲು ಇಷ್ಟಪಡುತ್ತಾರೆ. ಹೆಚ್ಚಿನ ಡೊಸ್ ನೀಡಿ ರೋಗಿಯನ್ನು ಬೇಗನೆ ಗುಣಮುಖರಾಗುವಂತೆ ಮಾಡಿದ ನಕಲಿ ವೈದ್ಯನೇ ಜನಸಾಮಾನ್ಯರ ಪಾಲಿನ ದೇವರು. ಮುಗ್ಧ ಜನರನ್ನು ಹೆಚ್ಚು ಡೊಸ್ ನೀಡುವುದರಿಂದ ರೋಗಿಯ ದೇಹದ ಕಿಡ್ನಿ, ಲಿವರ್, ಕರುಳು ಮುಂತಾದ ಅಂಗಾಂಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಅವಧಿಗಿಂತ ಮೊದಲೇ ಮೃತಪಡುವ ಸಂಭವವಿರುತ್ತದೆ ಎಂಬುದು ನುರಿತ ವೈದ್ಯರ ಅಭಿಪ್ರಾಯ.ಅಲ್ಲದೇ ಪ್ರತಿ ಭಾರೀ ಏನಾದರೂ ಕಾಯಿಲೆ ಬಂದಲ್ಲಿ ಆ ಕಾಯಿಲೆಗೆ ಹೆಚ್ಚಿನ ಡೊಸ್ ನೀಡಿದರೆ ಮಾತ್ರ ಕಡಿಮೆಯಾಗುತ್ತದೆ. ಇಲ್ಲವಾದಲ್ಲಿ ಅದರ ಪರಿಣಾಮ ಘನಘೋರ. ಅಮಾಯಕ ಜನರ ಜೀವದ ಜೊತೆ ಆಟವಾಡುತ್ತಿರುವ ಈ ನಕಲಿ ವೈದ್ಯರೇ ಈ ಭಾಗಗಳಲ್ಲಿ ಸ್ಪೇಷಾಲಿಸ್ಟ್.ನಕಲಿ ವೈದ್ಯರೆಲ್ಲ ಕೆಲ ಹೋಬಳಿ ಪ್ರದೇಶಗಳಲ್ಲಿ ಸ್ವಯಂ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದಾರೆ. ಇವರು ಹೆಚ್ಚು ಹಣ ಇರುವ ಪ್ರದೇಶಕ್ಕೆ ಲಗ್ಗೆ ಇಡುತ್ತಾರೆ. ಅಂತಹ ಪ್ರದೇಶಗಳಲ್ಲಿ ಅನಕ್ಷರಸ್ಥ ಹಾಗೂ ಇವರು ಹೇಳಿದ್ದಕ್ಕೆಲ್ಲ ತಲೆಯಾಡಿಸುವಂತ ಅಶಿಕ್ಷಿತ ಪ್ರದೇಶವೇ ಇವರ ಟಾರ್ಗೆಟ್. ವಿದ್ಯಾವಂತರು ಹಾಗೂ ಪ್ರಜ್ಞಾವಂತರೂ ನಕಲಿ ವೈದ್ಯರತ್ತ ಉಪಚಾರ ಪಡೆಯುತ್ತಿರುವುದು ವಿಪರ್ಯಾಸ. ಗ್ರಾಮೀಣ ಪ್ರದೇಶಗಳಲ್ಲಿ ನುರಿತ ಸರಕಾರಿ ಹಾಗೂ ಎಂಬಿಬಿಎಸ್ ಓದಿದ ವೈದ್ಯರ ಕೊರತೆಯಿಂದಲೇ ಗ್ರಾಮೀಣರಿಗೆ ನಕಲಿಗಳೇ ಗಾಢ ಫಾದರ್.ಔಷಧ ಮಾರಾಟಕ್ಕೆ ಬಿ.ಫಾರ್ಮಸಿ ಪದವಿ ಕಡ್ಡಾಯ ಎಂಬ ನಿಯಮವಿದೆ. ಎಂಬಿಬಿಎಸ್ ವೈದ್ಯರು ಬರೆದ ಚೀಟಿಗೆ ಮಾತ್ರ ಔಷಧ ನೀಡಬೇಕು.ಆದರೆ, ಈ ನಕಲಿ ವೈದ್ಯರಿಗೆ ನಿಯಮದ ಪರಿವಿಲ್ಲ. ಪಿಯುಸಿ ಅಥವಾ ಪದವಿ ಅನುತ್ತೀರ್ಣರಾದವರೇ ವೈದ್ಯರಾಗಿದ್ದಾರೆ. ಇವರು ಔಷಧ ಕೊಡುವುದಷ್ಟೇ ಅಲ್ಲ, ಚಿಕಿತ್ಸೆಯನ್ನೂ ನೀಡುತ್ತಾರೆ. ಹಳ್ಳಿಗಳಲ್ಲಿ ಕಿರಾಣಿ ಅಂಗಡಿ, ಪಾನ್ಶಾಪ್ ಅಂಗಡಿಗಳು ಗುಳಿಗೆ(ಮಾತ್ರೆ) ಹಂಚಲು ಮುಂದಾಗಿದ್ದರಿಂದ ಪರವಾನಗಿ ಪಡೆದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಬಿಎಎಂಎಸ್, ಬಿಎಚ್‌ಎಂಎಸ್, ಬಿಇಎಂಎಸ್, ಜಿಸಿಇಎಚ್ ಮತ್ತು ಆರ್‌ಎಂಪಿ ವೈದ್ಯರು ಇಂಜೆಕ್ಷನ್ ಕೊಡುವುದಾಗಲಿ, ಸಲಾಯಿನ್ ಮತ್ತು ಶಸ್ತ್ರಚಿಕಿತ್ಸೆ ಮಾಡುವಂತಿಲ್ಲ. ಅಲೋಪಥಿಕ ಮಾತ್ರೆಗಳನ್ನು ರೋಗಿಗೆ ಬರೆದು ಕೊಡುವಂತಿಲ್ಲ. ಆದರೆ ನಕಲಿಗಳು ಇದೆಲ್ಲವನ್ನೂ ಮಾಡುತ್ತಾರೆ.ಇತ್ತೀಚೆಗೆ ಅಥಣಿ ಪಟ್ಟಣದಲ್ಲಿ ನಕಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಇಬ್ಬರು ಮೃತಪಟ್ಟ ಉದಾಹರಣೆಯಿದೆ. ಇಂತಹ ಸಾವು ನೋವುಗಳು ಬೆಳಕಿಗೆ ಬಾರದೇ ಅದೆಷ್ಟೋ ಅಮಾಯಕರನ್ನು ನುಂಗಿ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ನಗರ ಪ್ರದೇಶದ ಹೈಟೆಕ್ ಆಸ್ಪತ್ರೆಗಳಲ್ಲಿ ೨-೩ ವರ್ಷ ಕಂಪೌಂಡರ್ಗಳಾಗಿ ಕೆಲಸ ಮಾಡಿದವರಿಗೆ ಡಾಕ್ಟರ್ಗಿರಿ ಪಟ್ಟ ಖಚಿತ. ಪರಿಣತ ವೈದ್ಯರ ಬಳಿ ಕೆಲಸ ಮಾಡಿದ ಅನುಭವವೇ ಇವರ ದುಡಿಮೆಯ ಬಂಡವಾಳ. ಯಾವ ಚಿಕಿತ್ಸೆಗೆ ಯಾವ ಔಷಧಿ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ನೋಡಿಕೊಂಡು ಹಳ್ಳಿಯ ಜನರ ಮೇಲೆಯೇ ಮೊದಲ ಪ್ರಯೋಗ. ಅದು ಬಿಟ್ಟರೆ ಬೇರೆನೂ ಗೊತ್ತಿರುವುದಿಲ್ಲ. ಅಂಥವರಿಂದ ಚಿಕಿತ್ಸೆ ಪಡೆದ ರೋಗಿಯನ್ನು ಭಗವಂತನೇ ಕಾಪಾಡಬೇಕು.ತಾಲೂಕಿನಲ್ಲಿ ಎಲ್ಲಿಯೂ ತಮ್ಮ ಬಗ್ಗೆ ಸಂಶಯ ಬಾರದಂತೆ ನಕಲಿ ವೈದ್ಯರು ತಮ್ಮ ಕಾರ್ಯ ಸಾಧಿಸುತ್ತಾರೆ. ಸದಾ ಡಾಕ್ಟರ್ ಎಂದು ಕರೆಸಿಕೊಳ್ಳುವ ಮೂಲಕ ಜನರನ್ನು ನಂಬಿಸಿದ್ದಾರೆ. ಕ್ಲಿನಿಕ್ ತೆಗೆದು ವೈದ್ಯ ಪದವಿ ಪ್ರವೀಣರು ಎಂದು ಜನರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ನಕಲಿ ವೈದ್ಯರ ಸೇವೆಯಲ್ಲಿನ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಾದ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ತಾಲೂಕಿನ ಗಲ್ಲಿ-ಗಲ್ಲಿಗಳಲ್ಲಿ ತಲೆ ಎತ್ತಿರುವ ಕ್ಲಿನಿಕ್ನ ನಕಲಿ ವೈದ್ಯರನ್ನು ಮಾತನಾಡಿಸಿದಾಗ ತಾನೊಬ್ಬ ಡಾಕ್ಟರ್ ಎಂದು ಹೇಳುತ್ತಾನೆ. ನಕಲಿ ವೈದ್ಯರಿಂದ ರಕ್ಷಿಸಿಕೊಳ್ಳಲು ಜನರೇ ಎಚ್ಚೆತ್ತುಕೊಂಡು ಜಾಗೃತರಾಗಬೇಕು ಇಲ್ಲವೇ ಹಣ ಕೊಟ್ಟು ಆರೋಗ್ಯ ಹಾಳುಮಾಡಿಕೊಳ್ಳಬೇಕು.
ವಿಪರ್ಯಾಸವೆಂದರೆ, ವಾಣಿಜ್ಯೀಕರಣದ ಭರಾಟೆಯಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ವರ್ಷದಿಂದ ವರ್ಷಕ್ಕೆ ಸೊರಗುತ್ತಾ ಸಾಗಿದ್ದು, ವೈದ್ಯಕೀಯ ಕಲೆಗಾರಿಕೆಯ ಕತ್ತು ಹಿಸುಕಿ, ವೈದ್ಯರ ಸಾಮರ್ಥ್ಯವನ್ನು ಕ್ಷುದ್ರಗೊಳಿಸುವ ಕೆಲಸವು ಎಲ್ಲೆಡೆಯಲ್ಲೂ ನಡೆಯುತ್ತಿದೆ. ಇದನ್ನು ಸರಿಪಡಿಸಬೇಕಾಗಿರುವ ಸರಕಾರ, ವೈದ್ಯಕೀಯ ಪರಿಷತ್ತು, ವೈದ್ಯರ ಸಂಘಟನೆಗಳೆಲ್ಲವೂ ಕರ್ತವ್ಯವಿಮುಖವಾಗಿ ತೆಪ್ಪಗೆ ಕುಳಿತಿವೆ. ಈಗಾಗಲೇ ವೈದ್ಯರಾಗಿರುವವರು ತಮ್ಮ ಸಾಮರ್ಥ್ಯವನ್ನು ಗಟ್ಟಿಗೊಳಿಸುವುದಕ್ಕೂ, ವೈದ್ಯವಿದ್ಯಾರ್ಥಿಗಳು ಉನ್ನತ ಕೌಶಲ್ಯಗಳನ್ನು ಕಟ್ಟಿಕೊಳ್ಳುವುದಕ್ಕೂ ಪ್ರೇರಣೆಯೆಲ್ಲಿದೆ?ರೋಗನಿದಾನ ಹಾಗೂ ಚಿಕಿತ್ಸೆಗಳು ಸಾವು-ಬದುಕಿನ ನಿರ್ಣಯಗಳಾಗಿರುವುದರಿಂದ ಸಮರ್ಥನಾದ ವೈದ್ಯನನ್ನು ಗುರುತಿಸುವುದು ರೋಗಿಯ ಪಾಲಿಗಂತೂ ಅತ್ಯಂತ ಮುಖ್ಯವಾಗಿರುತ್ತದೆ. ಎಷ್ಟೋ ಸಲ ರೋಗಿಗಳಿಗೆ ತಾವು ಚಿಕಿತ್ಸೆಗಾಗಿ ಕಂಡಿದ್ದ ವ್ಯಕ್ತಿಯು ನಿಜಕ್ಕೂ ವೈದ್ಯನೇ ಎನ್ನುವುದು ಕೂಡಾ ತಿಳಿದಿರುವುದಿಲ್ಲ. ಡಾಕ್ಟರ್ ಎಂಬ ಪೂರ್ವಪದ ಸಿಕ್ಕಿಸಿಕೊಂಡವರೆಲ್ಲರೂ ವೈದ್ಯರೇ ಆಗಿರಬೇಕಿಲ್ಲ. ಆಧುನಿಕ ವೈದ್ಯವಿಜ್ಞಾನದಲ್ಲಿ ತರಬೇತಾದ ವೈದ್ಯರಿಗಿಂತಲೂ ಬದಲಿ’ ತರಬೇತಿಯನ್ನು ಪಡೆದಿರುವ ವೈದ್ಯರು ಹಾಗೂ ಯಾವುದೇ ತರಬೇತಿಯನ್ನು ಪಡೆಯದ ನಕಲಿ ವೈದ್ಯರುಗಳ ಸಂಖ್ಯೆಯು ಬಲು ದೊಡ್ಡದಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, ೨೦೦೭ರ ಅನುಸಾರ ರಾಜ್ಯದ ಎಲ್ಲ ಖಾಸಗಿ ವೈದ್ಯರು ತಮ್ಮ ವತ್ತಿಯನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಈ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಅದರಂತೆ, ಪ್ರತಿಯೋರ್ವ ವೈದ್ಯನೂ ತನ್ನ ಪದವಿ ಪತ್ರವನ್ನೂ, ವೈದ್ಯಕೀಯ ಪರಿಷತ್ತಿನಲ್ಲಿ ಹಾಗೂ ನೋಂದಣಿ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಂಡ ದಾಖಲೆಗಳನ್ನೂ ತನ್ನ ಚಿಕಿತ್ಸಾಲಯದಲ್ಲಿ ಇಟ್ಟಿರಬೇಕಾಗುತ್ತದೆ. ಈ ದಾಖಲೆಗಳಿಂದ ವೈದ್ಯನ ವಿದ್ಯಾರ್ಹತೆಯೇನು, ಅವನು ಆಧುನಿಕ ವೈದ್ಯವಿಜ್ಞಾನದಲ್ಲಿ ಅಥವಾ ಬದಲಿ ವೈದ್ಯಕೀಯ ವ್ಯವಸ್ಥೆಗಳಲ್ಲಿ ತರಬೇತಾದವನೇ ಯಾವುದೂ ಇಲ್ಲದ ನಕಲಿ ವೈದ್ಯನೇ ಎನ್ನುವುದು ಸ್ಪಷ್ಟವಾಗುತ್ತದೆ. ಇವು ವೈದ್ಯನ ಒಟ್ಟು ಸಾಮರ್ಥ್ಯದ ಪ್ರಮಾಣವಲ್ಲದಿದ್ದರೂ, ಕನಿಷ್ಠ ಆತನವಿದ್ಯಾರ್ಹತೆಯನ್ನಾದರೂ ಅರಿಯಲು ನೆರವಾಗುತ್ತವೆ. ಓರ್ವ ವೈದ್ಯನು ತಾನು ತರಬೇತಿಯನ್ನು ಪಡೆದ ವೈದ್ಯಶಾಸ್ತ್ರದ ಚಿಕಿತ್ಸೆಯನ್ನಷ್ಟೇ ನೀಡಲು ಶಕ್ತನಾಗಿರುವುದರಿಂದ ಒಂದರಲ್ಲಿ ತರಬೇತಾದವರಿಂದ ಇನ್ನೊಂದು ವಿಧದ ಚಿಕಿತ್ಸೆಯನ್ನು ಯಾವ ಕಾರಣಕ್ಕೂ ಪಡೆಯಬಾರದು.

ಚಿಕ್ಕಬಳ್ಳಾಪುರ
ವೈದ್ಯ ವೃತ್ತಿಯನ್ನು ನಡೆಸಲು ನುರಿತ ತರಬೇತಿಯನ್ನು ಪಡೆಯದಿದ್ದರೂ ಸಹ, ಇದು ಹೋಗಲಿ ಹತ್ತನೇ ಕ್ಲಾಸ್ ಫೇಲ್ ಆಗಿದ್ದವನೂ ಸಹ ಡಾಕ್ಟರ್ ಆಗಿದ್ದ! ಕೈಯಲ್ಲಿ ಕತ್ತರಿ ಸೇರಿದಂತೆ ಸಲಕರಣೆಗಳನ್ನು ಹಿಡಿದು ರೋಗಿಯೊಬ್ಬನಿಗೆ ಆಪರೇಷನ್ ಮಾಡಲು ಸಿದ್ಧನಾಗಿದ್ದ!! ಇನ್ನೇನು ಆಪರೇಷನ್ ಆರಂಭವಾಗಬೇಕು ಎನ್ನುವಷ್ಟರಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ವೈದ್ಯನ ಜನ್ಮ ಜಾಲಿಡಿತು. ಇದರಿಂದ ಚಿಕಿತ್ಸೆ ನೀಡಿ, ಹಣವನ್ನು ರೋಗಿಯನ್ನು ಕೀಳಲು ಯೋಚನೆ ಮಾಡಿದ್ದ ನಕಲಿ ವೈದ್ಯ ಬೆವರಿನಿಂದ ಬೆಂದು ತಡಬಡಾಯಿಸಿದ. ಕೊನೆಗೆ ಪೊಲೀಸರಿಗೆ ಅತಿಥಿಯಾದ. ಈ ಘಟನೆ ಚಿಕ್ಕಬಳ್ಳಾಪುರ ನಗರದ ವಿವಿಧೆಡೆ ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಡೆಯಿತು. ಇದೊಂದೇ ಅಲ್ಲ, ಬೇರೆಯವರ ಹೆಸರಿನಲ್ಲಿ ಮತ್ತೊಬ್ಬರು ಆಸ್ಪತ್ರೆ ನಡೆಸುತ್ತಿರುವುದು, ಬಹಳಷ್ಟು ಕಡೆ ವೈದ್ಯರೇ ಇಲ್ಲದಿರುವುದು, ಬದಲಿಗೆ ವೈದ್ಯರ ಸಹಾಯಕರು, ಆಸ್ಪತ್ರೆ ಅಟೆಂಡರುಗಳು, ತರಬೇತಿಯನ್ನು ಪಡೆಯದ ಕೆಲ ಮಹಿಳೆಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಮಾಡುತ್ತಿರುವುದೂ ಸಹ ಪತ್ತೆಯಾಯಿತು. ಇನ್ನು ಮುಗ್ಧ ಜನರು ಇಂತಹ ನಕಲಿ ವೈದ್ಯರು ನೀಡುವ ಪರಿಣಾಮಕಾರಿಯಲ್ಲದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಇದೆಲ್ಲವೂ ದಾಳಿಯಿಂದ ಹೊರ ಬಂತು.

ಕಾರವಾರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ವೈದ್ಯರ ಕೊರತೆ ಹೆಚ್ಚುತ್ತಲೇ ಇದೆ. ಹಾಗಂತ ನಕಲಿ ವೈದ್ಯರ ಸಂಖ್ಯೆಗೇನೂ ಕಡಿಮೆಯಿಲ್ಲ. ಜಿಲ್ಲೆಯಲ್ಲಿ ನಕಲಿ, ಅಸಲೀ ವೈದ್ಯರು ಯಾರು ಎನ್ನುವುದನ್ನು ಪತ್ತೆ ಹೆಚ್ಚಲು ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು ಎಲ್ಲ ವೈದ್ಯರಿಗೆ ತಮ್ಮ ದಾಖಲಾತಿಗಳೊಂದಿಗೆ ನೊಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ. ಆದರೆ ಈ ಬಗ್ಗೆ ಇಲಾಖೆ ಗಂಭೀರ ಕ್ರಮಕೈಗೊಳ್ಳದೇ ನಿರ್ಲಕ್ಷ ತಳೆದಿದೆ ಎಂದೇ ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿವರ್ಷ ಸರಕಾರಿ ವೈದ್ಯರ ಹುದ್ದೆ ಖಾಲಿಯಾಗುತ್ತಿದ್ದು, ಖಾಸಗಿ ಕ್ಲಿನಿಕ್ಗಳು ಹೆಚ್ಚುತ್ತಿವೆ. ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವ ವೈದ್ಯರು ತಾವೇ ಖಾಸಗಿ ಕ್ಲಿನಿಕ್ಗಳನ್ನು ಮಾಡಿಕೊಳ್ಳು ತ್ತಿದ್ದಾರೆ. ಆರೋಗ್ಯ ಇಲಾಖೆ ದಮ್ಮಯ್ಯ ಎಂದರೂ ಸರಕಾರಿ ಆಸ್ಪತ್ರೆಗೆ ವೈದ್ಯರಾಗಿ ಬರಲು ಎಂ.ಬಿ.ಬಿ.ಎಸ್ ಪದವಿ ಪಡೆದವರು ಬರುತ್ತಿಲ್ಲ. ತನ್ಮಧ್ಯೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ವೈದ್ಯರನ್ನೇ ಜನರು ಹೊಣೆ ಮಾಡುತ್ತಿರುವುದು ಮತ್ತು ಹಲ್ಲೆಯಂತಹ ಘಟನೆ ನಡೆಯುತ್ತಿರುವುದು ಸಹ ವೈದ್ಯರಿಗೆ ಸರಕಾರಿ ಸೇವೆ ಹಿಡಿಸದೇ ಇರಲು ಕಾರಣವೆಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸರಕಾರಿ ವೈದ್ಯರೇ ತಮ್ಮ ಕರ್ತವ್ಯ ಮುಗಿಸಿದ ಮೇಲೆ ಖಾಸಗಿಯಾಗಿ ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಸರಕಾರಿ ಆಸ್ಪತ್ರೆ ಸೊರಗುತ್ತಿದೆ.

ಜಿಲ್ಲೆಯಲ್ಲಿ ೧೨೯ ಸರಕಾರಿ ವೈದ್ಯರ ಹುದ್ದೆ ಖಾಲಿಯಿದೆ. ಮಹಿಳಾ ಆರೋಗ್ಯ ಸಹಾಯಕರ ೩೬೭ ಹುದ್ದೆಗಳಲ್ಲಿ ೩೫೦ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಪುರುಷ ಆರೋಗ್ಯ ಸಹಾಯಕರ ೨೧೧ ಹುದ್ದೆಯಲ್ಲಿ ೧೦೯ ಹುದ್ದೆ ಇನ್ನೂ ಖಾಲಿಯಿದೆ. ಸ್ಟಾಫ್ ನರ್ಸ್ ಹುದ್ದೆಗಳ ಪೈಕಿ ೨೬೫ ರಲ್ಲಿ ೧೩೭ ಹುದ್ದೆ ಇನ್ನೂ ಖಾಲಿಯಿದೆ. ೩೨ ಔಷಧಿ ವಿತರಕರು, ೨೧ ಪ್ರಯೋಗಾಲಯ ತಂತ್ರಜ್ಞರ ಕೊರತೆಯಿದೆ. ಜಿಲ್ಲೆಯಲ್ಲಿ ೯೩ ಆಸ್ಪತ್ರೆಗಳ ಪೈಕಿ ೭೮ ಪ್ರಾಥಮಿಕ ಹಾಗೂ ೧೩ ತಾಲೂಕಾಸ್ಪತ್ರೆಯಿದ್ದು ಇವುಗಳಿಗಿಂತ ಖಾಸಗಿ ಆಸ್ಪತ್ರೆಗಳೇ ಹೆಚ್ಚಿವೆ. ಹೀಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಕಾಣದರೋಗಿಗಳೂ ಖಾಸಗಿ ಆಸ್ಪತ್ರೆಯಲ್ಲಿ ಕಾಣ ಸಿಗುತ್ತಾರೆ.ಉತ್ತರ ಕನ್ನಡ ಜಿಲ್ಲೆಯ ಜನರ ಆರ್ಥಿಕ ಸ್ಥಿತಿಗತಿ ಹೇಳಿಕೊಳ್ಳುವಷ್ಟು ಮಟ್ಟದಲ್ಲಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬಡ ರೋಗಿಗಳು ಅನಿವಾರ್ಯವಾಗಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ  ೩೬ ನೊಂದಾಯಿತ ಅಲೋಪತಿ ನರ್ಸಿಂಗ್ ಹೋಮ್ಗಳು, ೮೭ ಅಲೋಪತಿ ಕ್ಲಿನಿಕ್ಗಳು, ೩೭ ಬಿಡಿಎಸ್  ಕ್ಲಿನಿಕ್,೨ ಪಾಲಿಕ್ಲಿನಿಕ್,  ೧೬ ಹೋಮಿಯೋಪತಿ, ೮ ಆಲೋಪತಿ ಆಸ್ಪತ್ರೆ, ೧೭ ಪ್ರಯೋಗಾಲಯಗಳಿವೆ. ಅಲ್ಲದೇ ಭಟ್ಕಳದಲ್ಲಿ ೨೨,ಕಾರವಾರ ೩೩, ಶಿರಸಿ ೫೭, ಹಳಿಯಾಳ ೪೩, ಮುಂಡಗೋಡ ೧೫, ಅಂಕೋಲಾ ೩೨, ಕುಮಟಾ ೨೧, ಸಿದ್ದಾಪುರ ೨೧, ಯಲ್ಲಾಪುರ ೨೩ ಖಾಸಗಿ ವೈದ್ಯರು ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನೊಂದಣಿ ಮಾಡಿದ್ದು ಇದೇ ಮಾಹಿತಿ ಗಮನಿಸಿದರೆ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳ ಸಂಖ್ಯೆ ಹೆಚ್ಚಿದೆ.
ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಹತೆ ಪಡೆಯದ ವೈದ್ಯರ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಂತವರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿಲ್ಲ. ಬದಲಾಗಿ ವೈದ್ಯರ ನೊಂದಣಿಗೆ ಸೂಚಿಸುತ್ತಿದೆ. ದಾಖಲೆ ಪತ್ರಗಳು ಮತ್ತು ಅರ್ಹತೆಯುಳ್ಳ ವೈದ್ಯರು ಮಾತ್ರ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ. ಅರ್ಹತೆಯಿಲ್ಲದ ವೈದ್ಯರನ್ನು ವೈದ್ಯಕೀಯ ಭಾಷೆಯ ಪ್ರಕಾರ ನಕಲಿ ವೈದ್ಯರೆಂದು ಹೇಳಲಾಗುತ್ತಿದ್ದು ಇಂತವರ ಪತ್ತೆಗೆ ಇಲಾಖೆ ತುರ್ತು ಕ್ರಮ ಕೈಗೊಂಡರೆ ಜನತೆಗೆ ಅನುಕೂಲವಾಗಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಅಶೋಕರನ್ನು ಮಾತನಾಡಿಸಿದಾಗ ಜಿಲ್ಲೆಯಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿಲ್ಲ. ಖಾಸಗಿ ವೈದ್ಯರಿಗೆ ತಮ್ಮ ಅರ್ಹತೆಯೊಂದಿಗೆ ನೊಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅದು ನಡೆಯುತ್ತಿದೆ ಎಂದು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಉಂಟಾಗುವ ಅವ್ಯವಸ್ಥೆಯ ಬಗ್ಗೆ ಜನತೆ ಉಗ್ರವಾಗಿ ಸ್ಪಂದಿಸುತ್ತಿದ್ದು ವೈದ್ಯರ ಮೇಲೆ ಹಲ್ಲೆಯಂತಹ ಘಟನೆ ನಡೆಯುತ್ತಿದೆ. ಅಲ್ಲದೇ ಪ್ರಕರಣದ ವಸ್ತು ಸ್ಥಿತಿ ಅರಿಯುವ ಮೊದಲೇ ವೈದ್ಯರ ಮೇಲೆ ಏರಿ ಹೋಗುವ ಸನ್ನಿವೇಶ ಹೆಚ್ಚಾಗುತ್ತಿದೆ. ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ವೈದ್ಯರು ಬಲಿಪಶುಗಳಾಗಬೇಕಾಗಿದೆ. ಇದೆಲ್ಲ ಕಾರಣದಿಂದಾಗಿ ಸರಕಾರಿ ಆಸ್ಪತ್ರೆ ಸೊರಗುತ್ತಿದೆ. ಆಳುವವರು ಇದನ್ನೆಲ್ಲ  ನೋಡುವ ಸ್ಥಿತಿಯಲ್ಲಿಲ್ಲ. ಆದರೆ ಸರಕಾರಿ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲಾರೀ... ಎನ್ನುವುದಷ್ಟೇ ಅವರಿಂದ ಬರುವ ಉತ್ತರ.


ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳಿಂದ ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುಗಡೆ ಭೀತಿ

ಸೇನಯ್ಯ ಕನಕಪುರ
ಒಂದು ಕಿ.ಮೀ. ಅಂತರದಲ್ಲಿ ಪ್ರಾಥಮಿಕ ಹಾಗೂ ಮೂರು ಕಿ.ಮೀ. ಅಂತರದಲ್ಲಿ ಪ್ರೌಢ ಶಾಲೆ ಇರಬೇಕು ಎಂಬುದು ಸರಕಾರದ ನಿಯಮ ವಾಗಿದೆ. ಆದರೆ ಕೆಲವು ಕಡೆಗಳಲ್ಲಿ ಒಂದು ಕಿ.ಮೀ. ಒಳಗಡೆಯೇ ಕನ್ನಡ ಮಾಧ್ಯಮ ಶಾಲೆಯ ಬಳಿಯೇ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡ ಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ಕೊರತೆ ಎದುರಾಗಿದ್ದು ಸರಕಾರ ಸೂಕ್ತ ಕ್ರಮ ಕೈಗೊಳ್ಳ ದಿದ್ದಲ್ಲಿ ಈ ಶಾಲೆಗಳು ಮುಚ್ಚಲ್ಪಡಲಿವೆ.

ಕನ್ನಡ ಉಳಿಸುವುದೆಂದರೆ ಇಂಗ್ಲಿಷ್ ಕಲಿಯದಿರುವುದು ಎಂದರ್ಥವಲ್ಲ

ವಿಐಪಿ ಅಂಕಣ (ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಸಚಿವ)
ಕಾಗೇರಿಯವರೇ,
ಒಂದರ್ಥದಲ್ಲಿ ನನ್ನ ಸ್ನೇಹಿತರು ನೀವು. ನನ್ನ ಸಾಮಾನ್ಯ ದೂರವಾಣಿ ಕರೆಯೊಂದನ್ನು ತಮ್ಮ ಕೆಲಸದ ಒತ್ತಡದ ನಡುವೆಯೂ ಕೂಡ ಕೈಗೆತ್ತಿಕೊಳ್ಳಬಲ್ಲಿರಿ ಎಂಬ ವಿಶ್ವಾಸವಿದೆ ನನಗೆ. ಆದರೆ ಈ ಪತ್ರದ ಮೂಲಕ ನಿಮ್ಮ ಗಮನ ಸೆಳೆಯುವುದರ ಹಿಂದೆ ಕರ್ನಾಟಕ ರಾಜ್ಯದಲ್ಲಿ ನನ್ನಂತೆ ಯೋಚಿಸುವ ಗೆಳೆಯರನೇಕರ ಒಡಲಿನ ಬೆಚ್ಚಗಿನ ಧ್ವನಿಯೂ ಅಡಗಿದೆ ಎಂಬುದು ನಿಮಗರ್ಥವಾಗಲಿ ಎಂಬುದಷ್ಟೇ ನನ್ನ ಬಹಿರಂಗ ಓಲೆಯ ಉದ್ದೇಶ.ಹಿಂದೆ ನಾನು ಕಂಡು, ಕೇಳಿದ, ಅರ್ಥಮಾಡಿಕೊಂಡ ಅನುಭವದ ಆಧಾರದಲ್ಲಿ ಹೇಳುವುದಾದರೆ ಶಿಕ್ಷಣ ಇಲಾಖೆಗೆ ಗೋವಿಂದೇಗೌಡರೇ ಮಾದರಿ ಎನ್ನುತ್ತಾರೆ. ನಂತರ ಬಂದ ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಣ ಸಚಿವರು ಖಂಡಿತಾ ಅಸಮರ್ಥರಲ್ಲ.ವಿಷಯ ಅದಲ್ಲ. ಕರ್ನಾಟಕದಲ್ಲಿ ಶಿಕ್ಷಣ ಸಚಿವರಾಗಿ ನೀವು ರಾಜ್ಯದ ಮಕ್ಕಳಿಗೆ ಸಾಮಾಜಿಕ ನ್ಯಾಯ ಕೊಡಲು ಬದ್ಧರಾಗಿದ್ದೀರೋ ಅಥವಾ ಭಾಷೆಯ ಹೆಸರಲ್ಲಿ ಅಬ್ಬರಿಸುವವರಿಗೆ ಮಣಿದು ಮಂಡಿಯೂರಿ ಬಡವರ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಶಿಕ್ಷಣದಿಂದ ವಂಚಿಸುತ್ತಿರೋ ಎಂಬ ಆತಂಕ ಮತ್ತು ಜಿಜಾಟಿಸೆ ನನಗೆ ಮಾತ್ರವಲ್ಲ ರಾಜ್ಯದ ಕಡು ಬಡವರಲ್ಲಿ ಹಿಂದುಳಿದ ವರ್ಗಗಳಲ್ಲಿ, ದಲಿತರಲ್ಲಿ ಮನೆ ಮಾಡಿದಂತಿದೆ. ಅದಲ್ಲವಾದರೆ ನೋಡಿ ದಿನದಿಂದ ದಿನಕ್ಕೆ ನಮ್ಮ ಸರಕಾರಿ ಶಾಲೆಗಳು ಕಳೆಗುಂದುತ್ತಿವೆ.ಮಕ್ಕಳನ್ನು ಆಕರ್ಷಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ನಿಮ್ಮ ಪ್ರಯತ್ನದ ಬಗ್ಗೆ ನನ್ನ ತಗಾದೆಯಿಲ್ಲ. ಹಾಗೆ ನೋಡಿದರೆ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವುದರ ಮೂಲಕ ನೀವು ಇತರ ಹೆತ್ತವರಿಗೆ ಮಾದರಿಯಾಗಬೇಕೆಂದು ಯೋಚಿಸಿದಿರೋ? ಅಥವಾ ಇತರ ಮಕ್ಕಳು ನಿಮ್ಮ ಮಕ್ಕಳಂತೆ ಸರಕಾರಿ ಶಾಲೆಗೆ ಬರಲಿ ಎಂಬ ಸಂದೇಶ ರವಾನಿಸುವ ಪ್ರಯತ್ನ ಪಟ್ಟಿರೋ, ಅಂತೂ ಸರಕಾರಿ ಶಾಲೆಗಳ ಬಗ್ಗೆ ನಿಮ್ಮ ಬದ್ಧತೆ ನನಗರಿವಿದೆ.
ಕಾಗೇರಿಯವರೇ,
ನನ್ನ ನೇರ ಸಂದೇಹವಿರುವುದು ನಿಮ್ಮ ಇಚ್ಛಾಶಕ್ತಿಯ ಬಗ್ಗೆ ಅಲ್ಲ ನೀವು ತೆಗೆದುಕೊಳ್ಳುತ್ತಿರುವ ನಿಲುವು ಗಟ್ಟಿಯಾಗದಿರಲು ಅಂದರೆ ನಿಮ್ಮ ನಿರ್ಧಾರಗಳು ಆಗಾಗ ಸಡಿಲವಾಗಲು ಏನು ಕಾರಣವೆಂದೇ ನನಗರ್ಥವಾಗುತ್ತಿಲ್ಲ.ಸರಕಾರಿ ಶಾಲೆಯಲ್ಲಿ ಶಿಸ್ತು, ಪಾರದರ್ಶಕತೆ ಬರಲಿ ಎಂಬ ಕಾರಣಕ್ಕೆ ಶಾಲಾಭಿವೃದ್ಧಿ ಮಂಡಳಿಯಲ್ಲಿ ಮಕ್ಕಳ ಹೆತ್ತವರನ್ನೇ ಆಯ್ಕೆ ಮಾಡಬೇಕೆಂಬ ನಿಮ್ಮ ಅಥವಾ ನಿಮ್ಮ ಹಿಂದಿನವರ ಆದೇಶ ಸರಿಯಾದದ್ದೆ. ಆದರೆ ಆ ಮಕ್ಕಳ ಹೆತ್ತವರು ನಮ್ಮ ಮಕ್ಕಳು ಎಲ್ಲಾ ಮಕ್ಕಳಂತೆ ಮಾತೃ ಭಾಷೆಯೊಂದಿಗೆ ಆಂಗ್ಲ ಮಾಧ್ಯಮದಲ್ಲೂ ಕಲಿಯಬೇಕೆಂಬ ಆಸೆ ಹೊಂದಿದ್ದಾರೆ ಎಂದು ಅದೆಷ್ಟೂ ಹೇಳಿದರೂ ನೀವದನ್ನು ಗಂಭೀರವಾಗಿ ಇಲ್ಲಿಯವರೆಗೆ ಗಮನಿಸಿಲ್ಲ. ಈ ರಾಜ್ಯದ ಪುಟ್ಟ ಮಕ್ಕಳಲ್ಲಿ ಅದೇಕೋ ಎರಡೂ ವರ್ಗಗಳಾಗಿ ಹೋಗಿವೆ. ಒಂದನೇ ವರ್ಗ ಶ್ರೀಮಂತ ಮಕ್ಕಳದ್ದಾದರೆ, ಕಡು ಬಡವರು, ದಲಿತರು, ಹಿಂದುಳಿದ ವರ್ಗದ ಆರ್ಥಿಕ ಶಕ್ತಿ ಹೀನರ ಮಕ್ಕಳು ಎರಡನೇ ವರ್ಗದಲ್ಲಿ ಗುರುತಿಸಿಕೊಳ್ಳುತ್ತಾರೆ. ನೀವು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಹಿಡಿದು ನಿಮ್ಮ ಕ್ಷೇತ್ರದ ಸಿದ್ಧಾಪುರದ ಯಾವುದೇ ಹಳ್ಳಿಯಲ್ಲಿ ಒಮ್ಮೆ ಗಮನಿಸಿ, ನೂರಕ್ಕೆ ತೊಂಬತ್ತೆ?ದರಷ್ಟು ಬಡವರ ಮಕ್ಕಳು ಸರಕಾರಿ ಶಾಲೆಗೆ ಬರುತ್ತಾರೆ. ನಿಮ್ಮೂರಿನ ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಆರ್ಥಿಕ ಶಕ್ತಿಯುಳ್ಳವರ ಮಕ್ಕಳು ಸಮವಸ್ತ್ರ ಮತ್ತು ಬೂಟ್ ಧರಿಸಿ ಟಿಫಿನ್ ಬಾಕ್ಸ್ನೊಂದಿಗೆ ಖಾಸಗಿ ಬಸ್ನಲ್ಲಿ ಹೆತ್ತವರಿಗೆ ಟಾಟಾ ಮಾಡಿ ಆಂಗ್ಲ ಮಾಧ್ಯಮ ಶಾಲೆಯೊಳಗೆ ಪ್ರವೇಶ ಮಾಡುತ್ತಾರೆ.
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ ನ್ಯಾಯ ಕೊಡುತ್ತೇವೆ ಎನ್ನುವ ಸರಕಾರದ ಶಿಕ್ಷಣ ಇಲಾಖೆ ಸರ್ವರಿಗೂ ಸಮಬಾಳು ಸಮಪಾಲು ಕೊಡಬೇಕಾದ ಆಡಳಿತ ವ್ಯವಸ್ಥೆ ಬಡವರ ಮಕ್ಕಳು ಇಂಗ್ಲಿಷ್ ಕಲಿಯುವುದನ್ನು ಮಾತ್ರ ವಿರೋಧಿಸುತ್ತದೆ ಎನ್ನುವ ಸತ್ಯ ಶಿಕ್ಷಣ ಮಂತ್ರಿಯಾಗಿ ನಿಮಗೆ ತಿಳಿಯದಿರಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು. ಅದನ್ನು ಸರಿಪಡಿಸಲು ತಮ್ಮ ಹೆಣಗಾಟವು ನನಗರ್ಥವಾಗುತ್ತದೆ.
ಮಂತ್ರಿಗಳೇ,
ಪರಿಸ್ಥಿತಿಯ ಬಂಧಿಯಾಗಿ ಎಷ್ಟು ದಿನ ನೀವಿರುತ್ತೀರಿ? ಈ ರಾಜ್ಯದಲ್ಲಿ ಹುಟ್ಟಿ ಬೆಳೆಯುತ್ತಿರುವ ಪ್ರತೀ ಮಗುವಿಗೂ ಸಮಾನ ಶಿಕ್ಷಣದ ಹಕ್ಕಿದೆ ಎಂದು ನೀವೇಕೆ ಯೋಚಿಸುತ್ತಿಲ್ಲ? ಅಥವಾ ನಿಮ್ಮ ಯೋಚನೆ ಯಾಕೆ ಕಾರ್ಯ ರೂಪಕ್ಕೆ ಬರುತ್ತಿಲ್ಲ? ಸಮಾಜದಲ್ಲಿ ಡಾಕ್ಟರ್, ವಕೀಲರ, ಶಿಕ್ಷಕರ, ಉದ್ಯಮಿಗಳ ಅಥವಾ ಹೆಚ್ಚು ಸಂಬಳ ಬರುವ ಸರಕಾರಿ ನೌಕರರ, ಶಾಸಕರ, ಮಂತ್ರಿಗಳ, ಸಾಹಿತಿಗಳ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಹೋಗಬಹುದು- ಯಾವುದೇ ಕಾರಣಕ್ಕೂ ಕೂಲಿ ಮಾಡುವ, ಶೇಂಧಿ ತೆಗೆದು ಬದುಕುವ, ಮೀನು ಹಿಡಿಯುವ, ಕಲ್ಲು ಕಡಿಯುವ, ರಿ಼? ಚಾಲಕರ, ಬೀಡಿ, ಅಗರಬತ್ತಿ, ಗಾರ್ಮೆಂಟ್ಸ್ ಕೆಲಸ ಮಾಡುವವರ ಬಡವರ ಮಕ್ಕಳು ಸರಕಾರಿ ಕನ್ನಡ ಶಾಲೆಗೆ ಹೋಗಬೇಕೆನ್ನುವ ಕಾನೂನು ಇದೆಯೇನು? ರಾಜ್ಯದಲ್ಲಿ ೪೮,೪೦೦ರಷ್ಟು ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ ನೀವು ಆಂಗ್ಲ ಮಾಧ್ಯಮವಾಗಿ ಅಳವಡಿಸುವುದು ಕೇವಲ ೩೪೧ ಮಾತ್ರ. ಅಂದರೆ ಈಗಿರುವ ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಶೇ ೯೯.೨೪ ರಷ್ಟು ಮಾತ್ರ ಕಡುಬಡವರ ಅಥವಾ ದಲಿತರ ಮಕ್ಕಳಿಗೆ ಆಂಗ್ಲ ಮಾಧ್ಯಮ ತಲುಪುತ್ತಿಲ್ಲ.ಇದೇ ಪರಿಸ್ಥಿತಿ ಮುಂದುವರಿದರೆ ಏನಾಗಬಹುದೆಂದು ಯೋಚಿಸಿ.
ರಾಜ್ಯದಲ್ಲಿ ಒಟ್ಟು ಈಗಿರುವ ೪೮,೪೦೦ ಶಾಲೆಗಳ ಪೈಕಿ ೧೦ ಮಕ್ಕಳಿಗಿಂತ ಕಡಿಮೆ ಶಾಲೆಗಳ ಸಂಖ್ಯೆ- ನಿಮ್ಮ ಇಲಾಖೆ ಕೊಟ್ಟ ಮಾಹಿತಿಯಂತೆ ೨,೫೦೪. ಕುತೂಹಲವೆಂದರೆ ೫ ಮಕ್ಕಳಿಗಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಸಂಖ್ಯೆ ೬೯೨. ಮಕ್ಕಳಿಲ್ಲದ ಶಾಲೆಗಳನ್ನು ಎಷ್ಟು ದಿನ ನೀವಿಟ್ಟುಕೊಳ್ಳುತ್ತೀರಿ? ಇವುಗಳನ್ನು ಮುಚ್ಚುವುದೋ - ವಿಲೀನಗೊಳಿಸುವ ಹೊಸ ಸಂಪ್ರದಾಯವನ್ನು ಅನುಷ್ಠಾನ ಮಾಡಿದ ನಂತರ, ಬರುವ ವರ್ಷದಿಂದ ಮಕ್ಕಳು ಕಡಿಮೆ ಇರುವ ಶಾಲೆಗಳ ಸಮಸ್ಯೆಗೆ ಪರಿಹಾರವೆಂದರೆ ಮುಚ್ಚುವುದು ಅಥವಾ ತೆರೆಯದಿರುವುದು. ಅಂದರೆ ಯಾವುದೇ ಕಾರಣಕ್ಕೂ ಬಡವರಿಗೆ ಮೀಸಲಾದ ಸರಕಾರಿ ಕನ್ನಡ ಶಾಲೆಗಳನ್ನು ಬಡವರಿರುವವರೆಗೆ ನಡೆಸಲಾಗುವುದು ಎಂಬುದಷ್ಟೇ ಎಲ್ಲಾ ಸರಕಾರದ ಧೋರಣೆಯಾಗಿದೆ ಹೊರತು ಈ ರಾಜ್ಯದ ಶಾಲೆಗಳಲ್ಲಿ ಕಲಿಯುತ್ತಿರುವ ಶ್ರೀಮಂತರ ಮಕ್ಕಳಿಗೆ ಸಮನಾಗಿ ಬಡವರ ಮಕ್ಕಳಿಗೂ ಅವರು ಬಯಸಿದ ಶಿಕ್ಷಣ ಕೊಡುತ್ತೇವೆ ಎಂದು ನಿರ್ಧಾರ ತೆಗೆದುಕೊಳ್ಳುವ ತಾಕತ್ತು ತಮಗಿಲ್ಲದಿದ್ದರೆ ಮತ್ತಾರು ಮಾಡಲು ಸಾಧ್ಯ?
ಒಮ್ಮೆ ಯೋಚಿಸಿ ನೋಡಿ.
ಎಂದಾದರೂ ಈ ರಾಜ್ಯದಲ್ಲಿ, ರಾಜ್ಯ ಮತ್ತು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಗಳು ಬಡವರ ಮಕ್ಕಳಿಗೆ ಮಾತೃ ಭಾಷೆಯೊಂದಿಗೆ ಆಂಗ್ಲ ಭಾಷೆ ಕಲಿಸಬಾರದೆಂದು ಹೇಳಿದ್ದಿದೆಯೇ? ಹಾಗೆಂದು ಸಾಹಿತಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ನೀವು ಸಾರ್ವಜನಿಕ ಸರಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಬೋಧನೆ ತಡೆಹಿಡಿಯುತ್ತಿರಾದರೆ ಬಡವರ ಮಕ್ಕಳು ಮಾತ್ರ ಕನ್ನಡ ಉಳಿಸಲು ಬದುಕು ಸವೆಸಬೇಕು ಎಂದು ಸರ್ಕಾರ ನಿರ್ಧರಿಸಿದಂತಾಗುವುದಿಲ್ಲವೇ? ಅಥವಾ ಶ್ರೀಮಂತರ ಮಕ್ಕಳಂತೆ ನಮ್ಮ ಮಕ್ಕಳಿಗೂ ಇಂಗೀಷ್ ಕಲಿಕೆಯ ಅವಕಾಶ ಕೊಡಿ ಎಂದು ಈ ರಾಜ್ಯದ ದಲಿತರು, ಬಡವರು, ಕೂಲಿಗಾರರು ಬೀದಿಗಿಳಿಯಬೇಕೆಂದು ನೀವು ಅಂದರೆ ಸರಕಾರ ಮತ್ತು ನಮ್ಮೆಲ್ಲಾ ರಾಜಕೀಯ ಪಕ್ಷಗಳು ಯೋಚಿಸುತ್ತಿವೆಯೇ? ಹೇಗೆ?
ಕಾಗೇರಿಯವರೇ, ಸರಕಾರಿ ಶಾಲೆಗಳ ವ್ಯವಸ್ಥೆಗಳ ಬಗ್ಗೆ ನಮಗೆಲ್ಲ ಎಷ್ಟು ಹೆಮ್ಮೆ ಎಂದರೆ ಮಗುವೊಂದನ್ನು ತಂದು ಶಾಲೆಗೆ ಬಿಟ್ಟರೆ ಸಾಕು ಆ ಮಗುವಿಗೆ ಉಚಿತ ಸಮವಸ್ತ್ರ, ಉಚಿತ ಬಿಸಿಯೂಟ, ಪಠ್ಯಪುಸ್ತಕ, ಆರೋಗ್ಯ ತಪಾಸಣೆ, ಉಚಿತ ಬೈಸಿಕಲ್ ಹೀಗೆ ಸರಕಾರಿ ಶಾಲೆಗೆ ಬರುವ ಪ್ರತೀ ಮಗುವಿನ ಖರ್ಚು ಸರಕಾರವೇ ನೋಡಿಕೊಳ್ಳುತ್ತದೆ, ಆದರೆ ಅವರಿಗೆ ಬೇಕಾದ ಶಿಕ್ಷಣ ಬಿಟ್ಟು...ಇಷ್ಟೆಲ್ಲಾ ಹೇಳುವ ನನ್ನ ಸಲಹೆಯೇನು ಎಂದು ನೀವು ಕೇಳುತ್ತೀರಿ ಎಂಬುದು ಗೊತ್ತು.
ಯೋಚನೆ ಮಾಡಬೇಡಿ ಕಾಗೇರಿಯವರೇ,
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಂತ ಹಂತವಾಗಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಬೋಧಿಸಲು ಸರಕಾರಕ್ಕೆ ಸವಾಲುಗಳೇ ಇಲ್ಲ.ನ್ಯಾಯಾಂಗವಾಗಲಿ, ಶಾಸಕಾಂಗವಾಗಲಿ ಈ ನಿಲುವಿನ ಪರವೇ ಇದೆ. ನೀವು ತುರ್ತಾಗಿ ಮಾಡಬೇಕೆಂದಿರುವುದೇನೆಂದರೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ಕರೆದು ದಿಟ್ಟ ನಿರ್ಧಾರವೊಂದನ್ನು ಪ್ರಕಟಿಸಬೇಕು. ಕಡು ಬಡವರ ಮತ ಪಡೆದು ಆಯ್ಕೆಯಾದ ಯಾವ ಶಾಸಕರೂ ತಮ್ಮೂರ ಹಳ್ಳಿಗಳಲ್ಲಿರುವ ಮಕ್ಕಳ ಉತ್ತಮ ಶಿಕ್ಷಣವನ್ನೇ ಹೆಚ್ಚು ಬಯಸುತ್ತಾರೆ.ನೂತನವಾಗಿ ಆರಂಭಿಸುವ ೩೪೧ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅತ್ಯುತ್ತಮ ವ್ಯವಸ್ಥೆಗಳೊಂದಿಗೆ ಖಾಸಗಿ ಶಾಲೆಗಳಿಗೆ ಸವಾಲಾಗುವಂತೆ ನುರಿತ ಶಿಕ್ಷಕರಿಂದ ಆರಂಭವಾಗಬೇಕು. ಬರುವ ವರ್ಷದಿಂದ ಪ್ರತೀ ಜಿಲ್ಲೆಗಳಲ್ಲೂ ೬ನೇ ತರಗತಿಯ ನಂತರ ಆಂಗ್ಲ ಮಾಧ್ಯಮ ಶಾಲೆಗಳಿಗಾಗಿ ಬೇಡಿಕೆ ಹೆಚ್ಚಬೇಕು. ೬ನೇ ತರಗತಿಯವರೆಗೆ ಕಡ್ಡಾಯ ಮಾತೃ ಭಾಷೆ ಕನ್ನಡ ಕಲಿಕೆ ನಂತರ ಆಂಗ್ಲ ಮಾಧ್ಯಮ, ಬಡವರ ಮಕ್ಕಳಲ್ಲಿ ಹೊಸ ಕನಸು ಬಿತ್ತಬೇಕು.
ಜನಸಾಮಾನ್ಯರಲ್ಲಿ, ನಮಗ್ಯಾಕೆ ಖಾಸಗಿ ಶಾಲೆ, ಕಾಗೇರಿಯವರ ಸರಕಾರಿ ಶಾಲೆಯೇ ಅತ್ಯುತ್ತಮವಿದೆ ಎಂದು ಕಡು ಬಡವರಿಂದ ಹಿಡಿದು ಸಿರಿವಂತ ಹೆತ್ತವರಿಗೂ ಸಮಾಧಾನವಾಗುವಂತೆ ವಾತಾವರಣ ಸೃಷ್ಟಿಯಾಗಬೇಕು.
ಇಂತಹ ವ್ಯವಸ್ಥೆ ನಿರ್ಮಾಣವಾಗಬೇಕಿದ್ದರೆ ಇಡೀ ಶಿಕ್ಷಣ ಇಲಾಖೆ ಒಂದು ತಂಡವಾಗಿ ಕೆಲಸ ಮಾಡಬೇಕು. ವಿಧಾನ ಪರಿಷತ್ನಲ್ಲಿ ನಾವು ಕೂಡ ಶಿಕ್ಷಣದ ಬಗ್ಗೆ, ಸರಕಾರಿ ಶಾಲೆಯ ವ್ಯವಸ್ಥೆಯ ಬಗ್ಗೆ, ಮಕ್ಕಳ ಸಮವಸ್ತ್ರ, ಬಿಸಿಯೂಟ, ಕೊಠಡಿ, ಪೀಠೊಪಕರಣ, ಎಳೆಯ ಮಕ್ಕಳ ಹಾಜರಾತಿ, ಆರೋಗ್ಯ ಇವುಗಳ ಬಗ್ಗೆ ಹೆಚ್ಚು ಮಾತನಾಡಬೇಕು. (ಕ್ಷಮಿಸಿ, ಈಗ ಮಾತನಾಡುವಾಗ ಇದೆಲ್ಲಾ ಬಿಟ್ಟಿದ್ದೇವೆ ಅಥವಾ ಕಡಿಮೆ ಮಾಡಿದ್ದೇವೆ)!ಕೊನೆಗೊಂದು ವಿನಯವಾದ ವಿನಂತಿ ನನ್ನದು, ನಿಶ್ಚಯಕ್ಕೂ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯಬೇಡಿ ಎನ್ನುವ ಮಾತು ಬಡವರ ಮತ್ತು ದಲಿತರಿಗೆ ಆಂಗ್ಲ ಭಾಷೆ ಕಲಿಸಬೇಡಿ ಎನ್ನುವ ಅರ್ಥಕ್ಕಷ್ಟೇ ಸೀಮಿತ.

ಇಂಗ್ಲಿಷ್ ಮಾಧ್ಯಮದ ಕಲಿಕೆ ಮತ್ತು ಸರ್ಕಾರದ ಹೊಣೆಗಾರಿಕೆ

ಆನಂದ್ ಜಿ, ಬನವಾಸಿ ಬಳಗ
ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ರಾಜ್ಯದಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಶುರು ಮಾಡುವ ಬಗ್ಗೆ ತುಮಕೂರಿನಲ್ಲಿ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ. ಶ್ರೀಯುತರು ತಮ್ಮ ಹೇಳಿಕೆಯಲ್ಲಿ “ಜನರಿಂದ ಬೇಡಿಕೆ ಬಂದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರನೇ ತರಗತಿಯಿಂದ ಆರಂಭಿಸುತ್ತೇವೆ. ಇದು ಸರ್ಕಾರದ ಭಾಷಾನೀತಿಗೆ ವಿರುದ್ಧವಾಗಿಲ್ಲ, ಏಕೆಂದರೆ ಸರ್ಕಾರದ ಭಾಷಾನೀತಿ ಒಂದರಿಂದ ಐದನೇ ತರಗತಿಯವರೆಗಿನ ಕಲಿಕೆಗೆ ಮಾತ್ರಾ ಅನ್ವಯವಾಗುತ್ತದೆ" ಎಂದಿದ್ದಾರೆ. ಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದಾಗ ಸರ್ಕಾರವು ಶಿಕ್ಷಣದಲ್ಲಿನ ಭಾಷಾನೀತಿಯ ಬಗ್ಗೆ ಹೊಂದಿರುವ ನಿಲುವನ್ನು ಸಡಿಲಗೊಳಿಸುತ್ತಿರುವುದು ಕಾಣುತ್ತದೆ ಮತ್ತು ತಪ್ಪುದಾರಿಯೆಡೆಗೆ ನಾಡನ್ನು ಒಯ್ಯುತ್ತಿರುವಂತೆ ತೋರುತ್ತದೆ.
ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ : ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ರಾಜ್ಯಸರ್ಕಾರ ಹೊತ್ತಿರುವುದು ಸರಿಯಾಗಿದೆ. ಆದರೆ ನಿಭಾಯಿಸುತ್ತಿರುವ ರೀತಿ ನಿರಾಶಾದಾಯಕವಾಗಿದೆ.

ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ... : ಪ್ರಪಂಚದ ಮುಂದುವರೆದ ನಾಡುಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇರುವುದನ್ನು ನಾವು ಬಹುತೇಕ ಕಡೆ ನೋಡಬಹುದು. ಜಪಾನ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ... ಮೊದಲಾದ ಅನೇಕ ದೇಶಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಪ್ರಪಂಚದ ನಾನಾ ವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಈ ಬಗ್ಗೆ ಗೊಂದಲವಿಲ್ಲದ ಒಂದೇ ತೆರನಾದ ಅನಿಸಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವೂ ಸುಪ್ರಿಂ ಕೋರ್ಟಿನ ಒಂದು ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. ಅಷ್ಟೇ ಏಕೆ ಯಾವುದೇ ವಿಷಯವನ್ನು ನಮ್ಮ ತಾಯ್ನುಡಿಯಲ್ಲಿ ಕಲಿಯುವುದು ಸಮರ್ಪಕವೂ ಸುಲಭವೂ ಆಗಿದೆಯೆನ್ನುವುದು ಎಲ್ಲರಿಗೂ ಅನುಭವ ವೇದ್ಯವಾಗಿದೆ.

ಕರ್ನಾಟಕದ ಪರಿಸ್ಥಿತಿ : ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೫ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ" ಎನ್ನುವ ಅನಿಸಿಕೆಯಿದೆ. ವಾಸ್ತವವಾಗಿ ಇವುಗಳಲ್ಲಿ ಕೆಲವಲ್ಲಿ ಹುರುಳೂ ಇಲ್ಲದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರವೇ ಉನ್ನತ ಶಿಕ್ಷಣವಿರುವಾಗ ಅದಕ್ಕೆ ಹೋಗುವಾಗ ತೊಡಕಾಗುತ್ತದೆ ಎನ್ನುವುದು ದಿಟ. ವಾಸ್ತವವಾಗಿ ಉನ್ನತ ಶಿಕ್ಷಣವೂ ಸೇರಿದ ಹಾಗೆ ಎಲ್ಲ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕೆಂಬುದೇ ಸರಿಯಾದದ್ದಾದರೂ ಇಂದು ಪರಿಸ್ಥಿತಿ ಹಾಗಿಲ್ಲ ಅನ್ನುವುದು ವಾಸ್ತವ. ಹಾಗಾದರೆ ಈ ಕಲಿಕಾಮಾಧ್ಯಮ ಬದಲಾವಣೆಯೆನ್ನುವುದನ್ನು ಸಲೀಸಾಗಿ ಆಗಿಸುವಂತಹ ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ.
ಒಂದು ಹಂತದವರೆಗೆ ಕನ್ನಡದಲ್ಲಿ ಕಲಿಕೆ ನಡೆಯಿಸಿ, ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿಸುವುದರ ಮೂಲಕ ತೊಡಕನ್ನು ಕಡಿಮೆ ಮಾಡಿಸಬಹುದಾಗಿದೆ. ಕನ್ನಡದಲ್ಲೇ ಕಲಿತ ಪೋಷಕರನೇಕರು ತಾವು ಇಂಗ್ಲಿಷ್ ಬರದೆ ಅನುಭವಿಸಿದ್ದ ಪಾಡು ನೆನೆದು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲು ಸಜ್ಜಾಗುತ್ತಾರೆ. ಹಾಗೆ ಮಾಡುವ ಭರದಲ್ಲಿ ಮಗುವಿನ ವಾತಾವರಣವನ್ನೇ ಬದಲಿಸಲೂ ಮುಂದಾಗುತ್ತಾರೆ. ಹೀಗೆ ಪರಿಸರದ ನುಡಿಯೇ ಬದಲಾಗುವುದಾದರೆ ಮಗುವಿನ ಇಂಗ್ಲಿಷ್ ನಲ್ಲಿನ ಕಲಿಕೆ ಸಲೀಸೇ.. ಆದರೆ ಇಡೀ ಕನ್ನಡನಾಡಿನ ಪರಿಸರವನ್ನು ಬದಲಿಸಲಾಗದಲ್ಲಾ? ಇಂದು ಪರಿಸರದಲ್ಲಿ ಇಂಗ್ಲಿಷಿನ ಗಂಧಗಾಳಿಯಿಲ್ಲದ ಮಗುವನ್ನು ಇಂಗ್ಲಿಷ್ ಮಾಧ್ಯಮದ ಕಲಿಕೆಗೆ ಒಡ್ಡುವುದು "ಈಜು ಬಾರದ ಕೂಸನ್ನು ನೀರಲ್ಲಿ ಮುಳುಗಿಸಿ ಕೊಂದಂತೆ"! ಹಾಗಾಗಿ ಪೋಶಕರು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವ ಮುನ್ನ ತಮ್ಮ ಮಕ್ಕಳು ಕನ್ನಡವೂ ಬಾರದ, ಇಂಗ್ಲಿಷ್ ನಲ್ಲೂ ಪರಿಣಿತಿಯಿಲ್ಲದೇ ಎಡಬಿಡಂಗಿಗಳಾಗುವ ಅಪಾಯವನ್ನು ಮನಗಾಣಬೇಕಾಗಿದೆ. ಇದನ್ನು ತಿಳಿಸಿ ಹೇಳುವವರಾರು? ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಆದರೆ ಇಂಗ್ಲಿಷ್ ಮಾಧ್ಯಮಕ್ಕೆ ಮುಂದೆ ಬದಲಾಗುವಾಗ ತೊಡಕಾಗದಂತೆ ಜೊತೆಯಲ್ಲಿ ಇಂಗ್ಲಿಷ್ ನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ಕರ್ನಾಟಕ ರಾಜ್ಯ ಸರ್ಕಾರ.
ಬುದ್ಧಿವಂತರಾಗುತ್ತಾರೆ ಅನ್ನೋ ಮಾರುಕಟ್ಟೆ ತಂತ್ರ! : ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಪೊಳ್ಳು ವದಂತಿ. ವಾಸ್ತವವಾಗಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು “ಕಾನ್ಸೆಪ್ಚುಯಲ್ ಥಿಂಕಿಂಗ್"ನಲ್ಲಿ (ತಿರುಳು ಚಿಂತನೆ/ ಕಲಿಕೆಯಲ್ಲಿ) ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಟುಸ್ ಪುಸ್ ಇಂಗ್ಲಿಷ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲಿಷ್ ಮಾಧ್ಯಮದ ಮೊರೆ ಹೋಗುವುದು ಸಹಜ. ಈ ಪೊಳ್ಳನ್ನು ದೂರಮಾಡುವ ಹೊಣೆಗಾರಿಕೆ ಯಾರದ್ದು? ಕರ್ನಾಟಕ ರಾಜ್ಯ ಸರ್ಕಾರದ್ದು.. ಅಲ್ಲವೇ?
ಒಳ್ಳೇ ದುಡಿಮೆಯ ಅವಕಾಶ : ಇನ್ನು ಮೂರನೆಯ ಅನಿಸಿಕೆ ಎಂದರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು. ಹೌದೂ, ಓದಿನಲ್ಲಿ ಹೆಚ್ಚಿನ ಅಂಕ ಪಡೆದು, ಸಂದರ್ಶನದಲ್ಲಿ ಚೆನ್ನಾಗಿ ಪಾಲ್ಗೊಳ್ಳುವವರಿಗೆ ಒಳ್ಳೆ ಕೆಲಸ ಸಿಗುವುದು ಸಹಜ. ಆದರೆ ಹೀಗೆ ಒಳ್ಳೆಯ ಅಂಕ ಗಳಿಸಲಾಗಲೀ, ಸಂದರ್ಶನದಲ್ಲಿ ಚೆನ್ನಾಗಿ ಮಾಡಲಾಗಲೀ ಬೇಕಿರುವುದು ಆತ್ಮವಿಶ್ವಾಸ ಮತ್ತು ಅರಿವು ಎನ್ನುವುದು ಇಂತಹ ಸಂದರ್ಶನಗಳನ್ನು ಎದುರಿಸಿದ ಮತ್ತು ನಡೆಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜನರು, ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲಿಷ್ ಭಾಷೆಯ ಕಲಿಕೆ ಸಾಕೋ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಿ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಣಿತಿಯನ್ನು, ನಿಮ್ಮ ಮಕ್ಕಳಿಗೆ ಅವರು "ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುತ್ತಿರುವಾಗಲೂ" ಒದಗಿಸಿಕೊಡುವ ಹೊಣೆಗಾರಿಕೆ ನಮ್ಮದು ಎನ್ನಬೇಕಾಗಿದೆ. ಯಾರು ಹೀಗೆನ್ನಬೇಕೆಂದರೆ ಅದು ಕರ್ನಾಟಕ ರಾಜ್ಯಸರ್ಕಾರ.
ಯಾವ ಕಟ್ಟುಪಾಡನ್ನೂ ಒಪ್ಪಬೇಕಿಲ್ಲ! : ಇವೆಲ್ಲಾ ಮಾಡುತ್ತಲೇ ಕನ್ನಡದಲ್ಲಿ ಕಲಿಕೆಯನ್ನು ಇಂದು ಪ್ರಾಥಮಿಕ ಹಂತದವರೆಗೆ ಕಡ್ಡಾಯ ಎನ್ನುವ ನಿಲುವನ್ನು ಹೊಂದಿದ್ದರೂ ಕಡ್ಡಾಯದ ಕಟ್ಟುಪಾಡು ಬಿಟ್ಟು ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾದ ಹೊಣೆ ಸರ್ಕಾರದ್ದೇ ಆಗಿದೆ. ಹಾಗಿರುವಾಗ "ನಮ್ಮ ಭಾಷಾನಿಯಮ ಬರೀ ಐದನೇ ತರಗತಿವರೆಗೆ ಮಾತ್ರಾ ಅನ್ವಯವಾಗುತ್ತೆ, ಹಾಗಾಗಿ ಆರರಿಂದ ಇಂಗ್ಲಿಷ್ ಮಾಧ್ಯಮ ಮಾಡ್ತೀವಿ" ಅನ್ನೋದು ಆತ್ಮವಂಚನೆ ಮಾತ್ರವಲ್ಲಾ, ಆತ್ಮವಿಶ್ವಾಸದ ಕೊರತೆಯೂ ಹೌದು. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಕಲಿಕೆಯಿಂದ ಕನ್ನಡಿಗರ ಬದುಕನ್ನು ಹಸನುಗೊಳಿಸಲು ಅಸಾಧ್ಯ ಅನ್ನಿಸಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸಲಿ. ಹಾಗೆ ಆರಂಭಿಸುವ ಮುನ್ನ ಪರಿಸರದ ನುಡಿಯಲ್ಲಿನ ಕಲಿಕೆಗಿಂತಾ ಪರಭಾಷಾ ಮಾಧ್ಯಮವೊಂದರ ಮೂಲಕ ಯಾವುದೇ ಜನಾಂಗದ ಕಲಿಕೆ ಅತ್ಯುತ್ತಮವಾಗುತ್ತದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ಅಧ್ಯಯನದ ಆಧಾರ ಕೊಡಲಿ. ಈ ಹೊಣೆಗಾರಿಕೆ ಕರ್ನಾಟಕ ಸರ್ಕಾರದ್ದು!
ಬಲು ಮುಖ್ಯವಾಗಿ, ಮೇಲಿನ ಮೂರು ಕಾರಣಗಳಿಂದಾಗಿ ಕನ್ನಡಿಗ ಪೋಷಕರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲಿಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲಿಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾನತೆಯ ಆಕರ್ಷಕವಾದ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲಿಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ" ಎಂಬ ಬಣ್ಣದ ಮಾತಿನ ಸೆಳೆತಕ್ಕೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ.
ನಿಯಮ ಯಾರನ್ನೋ ನೋಡಿ ನಿಕ್ಕಿಯಾಗದು : ಅಂತೆಯೇ ಜನರು ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ" ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಇಂದು ಯಾರೇ ತಾಯ್ನುಡಿಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿಲ್ಲವಾದಲ್ಲಿ ಅದು ಅವರು ತಮ್ಮ ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು. ಯಾರೋ ಕೆಲವರು (ಇದು ಹಲವರಾದರೂ...) ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸಿಬಿಟ್ಟರು ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನೇ ತೀರ್ಮಾನಿಸುವುದು ಸರಿಯಲ್ಲ.
ಹಾಗಾಗಿ ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ. ಈಗ ಇನ್ನೂ ಉನ್ನತ ಶಿಕ್ಷಣವು ಇಂಗ್ಲಿಷ್ ನಲ್ಲಿ ಮಾತ್ರಾ ಲಭ್ಯವಿರುವುದರಿಂದ, ಕನ್ನಡ ಮಾಧ್ಯಮದ ಮಕ್ಕಳಿಗೆ-ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಬದಲಾಗುವಾಗ-ಆದಷ್ಟು ತೊಡಕನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ರೂಪಿಸಿ ಜಾರಿಗೊಳಿಸಲಿ. ಇದೆಲ್ಲಾ ಬಿಟ್ಟು, ತಾನೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ, ಒಳ್ಳೇ ಕೆಲಸ ? ಒಳ್ಳೇ ಓದು ? ಬುದ್ಧಿವಂತಿಕೆ ಎನ್ನುವ ಬಣ್ಣದ ಸಕ್ಕರೆಕಡ್ದಿಯ ಮಾತುಗಳ ಮೂಲಕ... ಜನರನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ. ಕಾಗೇರಿಯವರು ಇವೆಲ್ಲವನ್ನು ಬಲ್ಲರೆಂದು ಭಾವಿಸುತ್ತಾ, ಸರ್ಕಾರ ತನ್ನ ಸದರಿ ನಿಲುವಿನಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸುತ್ತೇನೆ

ಆಂಗ್ಲ ಪ್ರೇಮಿ ರಾಜ್ಯ ಸರಕಾರಕ್ಕೆ ಕೆಲ ಪ್ರಶ್ನೆಗಳು

ಆನಂದ್ ಜಿ, ಅಧ್ಯಕ್ಷರು, ಬನವಾಸಿ ಬಳಗ
ಪ್ರಪಂಚದಲ್ಲಿ "ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ" ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯ ಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.
ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾ ನೀತಿಯನ್ನೂ, ಶಿಕ್ಷಣ ನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ?
ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ... ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.
ಈಗಿನ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ.ಬದಲಾಗಿ ನಮ್ಮ ರಾಜ್ಯ ಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲಿಷನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು.

Thursday, 20 September 2012

ಇಂಗ್ಲಿಷ್ ಶಾಲೆಗಳ ಬಗ್ಗೆ ಕನ್ನಡಿಗರು ಏನನ್ನುತ್ತಾರೆ?

ಮುರುಳಿ ಮೋಹನ್
ಸಪ್ತಗಿರಿ ಸ್ಟೋಡಿಯೂ
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲು ಮಾಡಬಲ್ಲುದಾಗಿದೆ.ರಾಜ್ಯ ಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡು ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು "ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು" ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ "ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ" ಎಂದಿತು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ "ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ" ಎಂದಿತು. "ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?" ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ "ಇದು ಕೇಂದ್ರ ಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ" ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರ ಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.ಈಗ ರಾಜ್ಯ ಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. "ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಉಲ್ಲಂಘಿಸುತ್ತಿಲ್ಲ" ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾ ನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು "ಕನಿಷ್ಠ ೫ನೇ ತರಗತಿಯವರೆಗೆ" ಎಂದು ಪರಿಗಣಿಸದೇ "ಗರಿಷ್ಠ ೫ನೇ ತರಗತಿಯವರೆಗೆ" ಎಂದು ಸರ್ಕಾರ ಪರಿಗಣಿಸಿದಂತಿದೆ.ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು "ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ"ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲ ಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ.

ಏಕರೂಪ ಶಿಕ್ಷಣದ ಬಗ್ಗೆ ಮೊದಲು ಚರ್ಚೆಯಾಗಲಿ

* ರಾಕೇಶ್ ಶೆಟ್ಟಿ
ಕಡೆಗೂ ’ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ಇಂಗ್ಲಿಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು "ಏಕರೂಪ ಶಿಕ್ಷಣ"ದ ಬಗ್ಗೆ. ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ, ಸಾಮಾಜಿಕ ನ್ಯಾಯ, ಭಾಷೆ, ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?೧೦ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ, ಆನಂದದ ವಿಷಯ ಅನ್ನುವುದರ ಅರಿವಿದೆ. ಹಾಗೆಯೇ ೧೦ರ ನಂತರ ಇಂಗ್ಲಿಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ, ಕೀಳರಿಮೆಯ ಅನುಭವವೂ ಆಗಿದೆ. ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲಿಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ, ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲಿಷ್ ಲೋಕಕ್ಕೆ ಕಾಲಿಟ್ಟು ಅರ್ಧಕ್ಕರ್ಧ ಜನ ಕೀಳರಿಮೆ, ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು. ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲಿಷ್ ಮಾಧ್ಯಮ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ. ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲಬಸ್ಸೋ, ಐ.ಸಿ.ಎಸ್.ಈ ಸಿಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ. ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏಕೆ ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?ಇದ್ಯಾವುದನ್ನು ಕೇಳದೇ, ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮಕ್ಕೆ ಹೋಗಬಹುದು, ಹೋದರೂ ಅವರು ಕನ್ನಡಕ್ಕಾಗುತ್ತಿರುವ ಅಪಾಯದ ಬಗ್ಗೆ ದನಿಯೇತ್ತಬಹುದು, ಆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ/ರೈತರ/ದಲಿತರ ಮಕ್ಕಳು ಮಾತ್ರ ಕನ್ನಡ ಮೀಡಿಯಂ ಇರುವ ಸರ್ಕಾರಿ ಶಾಲೆಯಲ್ಲಿ ಕಲಿಯಲಿ ಅನ್ನುವ ಧೋರಣೆಯನ್ನ ಒಪ್ಪಬೇಕಾ?ಏಕರೂಪ ಸಿಲಬಸ್ ಕೂಡ ಬರಲಿ : ಏಕರೂಪ ಭಾಷಾ ಮಾಧ್ಯಮದಂತೆ, ಏಕರೂಪ ಸಿಲಬಸ್ ಕೂಡ ಬರಲಿ ಅನ್ನುವುದು ಸಹ ನಮ್ಮ ಬೇಡಿಕೆಯಾಗಬೇಕಲ್ಲವೇ? ಹಾಗೊಂದು ವೇಳೆ ಏಕರೂಪ ಶಿಕ್ಷಣ (ಭಾಷಾ ಮತ್ತು ಸಿಲಬಸ್) ಜಾರಿಯಾದರೆ ಆಗ ಜನರೇ ಸರ್ಕಾರಿ ಶಾಲೆಗಳೆಡೆಗೆ ತಿರುಗಿ ನೋಡುವ ಸಾಧ್ಯತೆಗಳೂ ಇವೆ. ಮತ್ತು ಇದು ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲೂ ಸಹಕಾರಿಯಾಗಬಹುದು. ಹಾಗಾಗಿ ಸರ್ಕಾರ ಅಂತಹ
 ಏಕರೂಪ ಶಿಕ್ಷಣ ನೀತಿಯ ಬಗ್ಗೆ ಅಗತ್ಯವಾಗಿ ಚಿಂತಿಸಲೆಬೇಕಿದೆ. ಸಾಹಿತಿಗಳ ಹೋರಾಟ ಈ ಅಂಶವನ್ನೇ ಇರಿಸಿಕೊಂಡರೆ ಬಹುಶಃ ಅವರಿಗೆ ಜನಸಾಮಾನ್ಯರ ಬೆಂಬಲವೂ ಸಿಗಬಹುದು.ಈ ಚರ್ಚೆಯಲ್ಲಿ ಕನ್ನಡ ಮಾಧ್ಯಮದ ಪರ ನಿಂತವರು, ಇಂಗ್ಲಿಷ್ ಮೀಡಿಯಂ ಪರ ನಿಂತವರು, ಎಲ್ಲಿಯೂ ನಿಲ್ಲದೆ ಸರ್ಕಾರ ಬೇಕಾದ್ದು ಮಾಡಿಕೊಳ್ಳಲಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆ ಸೇರಿಸುತ್ತೀವಿ ಅನ್ನುವವರು, ಹಾಗೆಯೇ ತುತ್ತಿನ ಚೀಲದ ತುರ್ತಿಗೆ ಬಿದ್ದು ಪರಿತಪಿಸುತ್ತ ಇದ್ಯಾವುದರ ಅರಿವೇ ಇಲ್ಲದಿರುವ ಜನರನ್ನು ಸೇರಿಸಿಕೊಂಡೇ ಪರಿಹಾರ ಹುಡುಕಬೇಕು. ಇಲ್ಲಿ ನಡೆಯುತ್ತಿರುವುದು ಚರ್ಚೆ ಮತ್ತು ಅಂತಿಮವಾಗಿ ಎರಡೂ ಬದಿಯವರು ಮುಂದಿನ ಪೀಳಿಗೆಯ ಮತ್ತು ನಾಡು-ನುಡಿಯ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿರುವುದರಿಂದ ಕತ್ತಿ-ಗುರಾಣಿಗಳನ್ನು ಪಕ್ಕಕ್ಕಿಟ್ಟು, ಚಿಂತನ-ಮಂಥನದಲ್ಲಿ ತೊಡಗಿ ಒಂದು ಮಾರ್ಗ ಕಂಡುಹಿಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನೆಸಿಕೊಳ್ಳಬಹುದು(ಒಳ್ಳೆಯ ಕಾರಣಕ್ಕಾಗಿ).ಶಿಕ್ಷಣ ನಮ್ಮ ಮೂಲಭೂತ ಹಕ್ಕು ಅನ್ನುವ ಐತಿಹಾಸಿಕ ತೀರ್ಪಿನ ಕಡ್ಡಾಯ ಜಾರಿಯ ಜೊತೆಗೆ ರಾಜ್ಯ ಸರ್ಕಾರ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ದೇಶಕ್ಕೆ ಮಾದರಿಯಾಗಲಿ.

ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವುದು ಹೇಗೆ?

ದೀಪಕ್ ಎಂ., ಕನ್ನಡ ಶಿಕ್ಷಕ, ಬೆಂಗಳೂರು
ಆಂಗ್ಲ ಮಾಧ್ಯಮದಲ್ಲಿ ಓದುವ ಬಹುತೇಕ ಮಂದಿ ಮಕ್ಕಳು ತಾವು ಕನ್ನಡದಲ್ಲಿ ಸ್ವಲ್ಪ ಹಿಂದು ಎಂದು ನಾಚಿಕೆಯಿಂದ, ಸಂಕೋಚದಿಂದ, ಬೇಸರದಿಂದ ಮತ್ತು ಕೆಲವೊಮ್ಮೆ ಉಡಾಫೆಯಿಂದ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ. ನಿಮಗೆ ನೆನಪಿರಲಿ, ನಾನು ಹೇಳುತ್ತಿರುವುದು ಹೊರರಾಜ್ಯದಿಂದ ಬಂದು ಕನ್ನಡ ಕಲಿಯುವವರ ಕುರಿತಾಗಿ ಅಲ್ಲ! ಬದಲಿಗೆ ನಮ್ಮ ನಾಡಿನಲ್ಲಿಯೆ ಹುಟ್ಟಿ, ನಮ್ಮ ನಿಮ್ಮ ಮನೆಗಳ ಸುತ್ತ ಬೆಳೆದಿರುವ ಕನ್ನಡನಾಡಿನ ಭಾವಿ ಪ್ರಜೆಗಳ ಕುರಿತಾಗಿ.
ಅಸಲಿಗೆ ಅವರು ಹಿಂದುಳಿಯಲು ಕಾರಣಗಳೇನು? : ಇಂದಿನ ಕಾಲದಲ್ಲಿ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಕಳಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಎರಡು ವರ್ಷ ಇನ್ನೂ ತುಂಬಿರುವುದಿಲ್ಲ ಆಗಲೇ ಪ್ಲೇ ಹೋಂ ಸೇರಿಸಿಬಿಟ್ಟಿರುತ್ತಾರೆ. ಸುಮ್ಮನೆ ಆಟವಾಡಿಸಿ ಮನೆಗೆ ಕಳಿಸುವ ಬದಲು, ಪುಟ್ಟಪುಟ್ಟ ಮೃದುವಾದ ಬೆರಳುಗಳಿಂದ ಎಬಿಸಿಡಿ ಬರೆಯುವ ತರಬೇತಿ ಆರಂಭವಾಗುವುದೇ ಅಲ್ಲಿಂದ. ಇಷ್ಟು ಮಾತ್ರವಲ್ಲದೆ, ಇನ್ನೂ ಅಪ್ಪ ಅಮ್ಮ ಅನ್ನಲು ಬರದ ಮಕ್ಕಳ ಜೊತೆ ಆಂಗ್ಲ ಭಾಷೆಯಲ್ಲಿಯೇ ಮಾತನಾಡಿರೆಂದು ಪಾಲಕರಿಗೆ ಶಿಕ್ಷಕರು ಒತ್ತಡ ಹೇರುತ್ತಾರೆ.
ಕನ್ನಡದ ಕಲಿಕೆಗೆ ಮೂಲದಲ್ಲಿಯೇ ಬಲವಾದ ಹೊಡೆತ ಬಿದ್ದಿರುತ್ತದೆ. ಅಪ್ಪ ಅಮ್ಮ ಅನ್ನುತ್ತಿದ್ದ ಮಕ್ಕಳು ನಿಧಾನವಾಗಿ ಮಮ್ಮಿ ಡ್ಯಾಡಿ ಅನ್ನಲು ಪ್ರಾರಂಭಿಸುತ್ತವೆ, ಬಾ ಹೋಗು ಅನ್ನುವ ಬದಲು ಕಂ ಗೋ ಅನ್ನಲು ಪ್ರಾರಂಭಿಸುತ್ತವೆ. "ಅಯ್ಯೋ, ನನ್ನ ಮಗ ಎಷ್ಟು ಮುದ್ದು ಮುದ್ದಾಗಿ ಇಂಗ್ಲಿಷಲ್ಲಿ ಮಾತಾಡ್ತಾನೆ ನೋಡ್ರೀ" ಅಂತ ಊರ ತುಂಬ ಡಂಗುರ ಸಾರಿಕೊಂಡು ಬಂದಿರುತ್ತಾಳೆ ’ಮಮ್ಮಿ’. ಆಮೇಲೆ ಮಗು ದೊಡ್ಡದಾಗುತ್ತಿದ್ದಂತೆ ಕನ್ನಡ ನಾಡಿನಲ್ಲೇ ಹುಟ್ಟಿದ್ದೋ ಅಥವಾ ಹೊರರಾಜ್ಯದಿಂದ ಬಂದಿದ್ದೋ ಎಂಬ ಸಂದೇಹ ಕಾಣುವಷ್ಟು ಆಂಗ್ಲ ಭಾಷೆಯಲ್ಲಿ ವ್ಯವಹರಿಸಲು ಪ್ರಾರಂಭಿಸಿರುತ್ತದೆ.
ಮಕ್ಕಳಿಗೆ ನರ್ಸರಿಯಿಂದಲೆ ಕನ್ನಡದ ಮೂಲ ಅಂಶಗಳ ಕುರಿತಾಗಿ ಅಸಡ್ಡೆಯಿಂದ ಬೋಧನೆ ಆರಂಭವಾಗಿರುತ್ತದೆ. ಇದಕ್ಕೆ ಪೂರಕವಾಗಿ ಮಕ್ಕಳ ಎಲ್ಲಾ ಮನೆಗೆಲಸ ನೋಡುವ ಪೋಷಕರು ಕನ್ನಡದ ಕುರಿತು ತಾಳುವ ಧೋರಣೆ ಸಹ ಮಕ್ಕಳ ಕನ್ನಡ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಮುಂದುವರಿದಂತೆ, "ನಮ್ಮ ಮಕ್ಕಳಿಗೆ ಕನ್ನಡ ಮಾತಾಡಲು ಬರುತ್ತೆ, ಮನೇಲೆಲ್ಲ ಕನ್ನಡ ತಾನೆ ಮಾತಾಡೋದು. ಆದರೆ, ಓದುವುದು ಬರೆಯುವುದು ಸ್ವಲ್ಪ ಕಷ್ಟ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದಲ್ವಾ?" ಎಂದು ಸಮಜಾಯಿಷಿ ಹೇಳುವುದು ಸರ್ವೇಸಾಮಾನ್ಯವಾಗಿದೆ.
ಒಂದು ಎರಡು ಬಾಳೆಲೆ ಹರಡು, ಕಾಮನಬಿಲ್ಲು ಕಮಾನು ಕಟ್ಟಿದೆ, ನಾಯಿಮರಿ ನಾಯಿಮರಿ ತಿಂಡಿಬೇಕೆ, ನಮ್ಮ ಮನೆಯಲೊಂದು ಪುಟ್ಟ ಮಗುವು ಇರುವುದು... ಮುಂತಾದ ಹಾಡುಗಳು ಇಂದಿನ ಎಷ್ಟು ಮಕ್ಕಳಿಗೆ ಗೊತ್ತಿರುತ್ತವೆ? ಮಕ್ಕಳಿಗೆ ಗೊತ್ತಿರುವುದಿರಲಿ, ಅವರನ್ನು ಹೆತ್ತ ಪಾಲಕರಿಗೂ ಗೊತ್ತಿರುವುದಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ಲವಾ?
ಪಾಲಕರಿಗೆ ತಿಳಿದಿರಲಿ : ಮಕ್ಕಳು ಮೊದಲಿನಿಂದಲು ಭಯಪಡುವುದು ಒತ್ತಕ್ಷರಗಳಿಗೆ. ಅಸಲಿಗೆ ಸರಿಯಾಗಿ ಕನ್ನಡ ಮಾತನಾಡಲು ಬಂದರೆ ಅದು ಸಮಸ್ಯೆಯೆ ಅಲ್ಲ. ೨೦ ರುಪಾಯಿ ಬೆಲೆಬಾಳುವ ಒಂದು ಕನ್ನಡ ನಿಘಂಟು ನಮ್ಮ ಮಕ್ಕಳ ಕೈಗೆ ದೊರೆತು, ಅವರು ಅದನ್ನು ತೆರೆದು ಓದಲು ಪ್ರಾರಂಭಿಸಿದರೆ ಸಾಕು ಒತ್ತಕ್ಷರ ಸಮಸ್ಯೆ ಇರಲಿ, ಕಾಗುಣಿತದ ಸಮಸ್ಯೆಯು ಹುಟ್ಟುವುದಿಲ್ಲ. ತುಂಬಾ ಮಕ್ಕಳು ಹೊರಗಡೆ ಓಡಾಡುವಾಗ ಕಾಣಿಸುವ ಕನ್ನಡ ಬರಹಗಳನ್ನು, ನಾಮ ಫಲಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಕನ್ನಡ ಸುಲಭವಾಗುತ್ತದೆ.
ಕನ್ನಡ ಕಲಿಸುವುದು ಹೇಗೆ? : ಎಲ್ಲಾ ಮಕ್ಕಳು ಅರಿಯಬೇಕಾದ ಸತ್ಯವೆಂದರೆ ಕನ್ನಡವನ್ನು, ಕನ್ನಡ ಬಾರದವರು ಸಹ ಕನಿಷ್ಟ ೨೧ ದಿನಗಳ ಒಳಗಾಗಿ ಓದಿ ಬರೆಯಲು ಕಲಿಯಬಹುದೆಂಬುದು. ಅದಕ್ಕೆ ’ಆಸಕ್ತಿ’ ಎಂಬ ಅಂಶವನ್ನು ಮಾತ್ರ ಖರ್ಚು ಮಾಡಿದರೆ ಸಾಕು. ಕನ್ನಡ ಭಾಷೆಯ ಶ್ರೀಮಂತಿಕೆ ಅವರ ಪಾಲಾಗುತ್ತದೆ. ಇನ್ನು ಮಕ್ಕಳು ಕನ್ನಡದಲ್ಲಿ ಓದಲು ಪೂರ್ತಿ ವಾಕ್ಯವನ್ನು ಆಯ್ಕೆ ಮಾಡಿಕೊಳ್ಳದೆ, ಪದ ಪದವನ್ನು ಬಿಡಿ ಬಿಡಿಯಾಗಿ ಓದಲು ಪ್ರಾರಂಭಿಸಿದರೆ ಸುಲಭವಾಗಿ ಓದಲೂಬಹುದು. ಕನ್ನಡ ಕಲಿಸುವಾಗ ಪಾಲಕರಿಗೇ ಕನ್ನಡದ ಬಗ್ಗೆ ಅಸಡ್ಡೆ ಇರಬಾರದು. ಅದನ್ನು ಒಂದು ಕರ್ತವ್ಯ ಎಂಬಂತೆ ಕಲಿಸಬೇಕು.
ವಿದ್ಯಾರ್ಥಿಗಳು ಮನೆಯಲ್ಲಿ ಬಿಡುವಾಗಿದ್ದಾಗ ಕನ್ನಡ ಸುದ್ದಿ ವಾಹಿನಿಗಳನ್ನು, ರೇಡಿಯೋವನ್ನು ಮತ್ತು ಚಲನಚಿತ್ರಗಳನ್ನು ನೋಡುವುದರಿಂದ ಹಾಗು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದರಿಂದಲು ಕನ್ನಡವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ಪೋಷಕರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ಮಗ್ಗಿ ಪುಸ್ತಕ ಅಥವಾ ಕಾಗುಣಿತ ಪುಸ್ತಕವನ್ನು ಕೊಡಿಸಿದರೆ ಸಾಕು. ಆ ಪುಸ್ತಕಗಳು ಕಾಗುಣಿತಕ್ಕೆ ಅತ್ಯಂತ ಮಹತ್ವದ ಆಧಾರ ಪುಸ್ತಕಗಳಾಗಿ ಉಪಯೋಗಕ್ಕೆ ಬರುತ್ತವೆ. ಪೋಷಕರು ತಮ್ಮ ಮಗು ಪ್ರೌಢಶಾಲೆಗೆ ಬಂದು ಕನ್ನಡದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ತಾವೇ ಸ್ವತಃ ಕನ್ನಡವನ್ನು ಬೋಧಿಸುವುದು ಒಳ್ಳೆಯದು.
ಆಗ ಆ ಮಗುವಿಗೆ ತಾನು ಕನ್ನಡವನ್ನು ಹಿಂದೆ ಕಲಿತಿದ್ದೀನಿ ಎಂಬ ಭಾವನೆ ಮೊದಲು ತೊಲಗಿಸಿ. ಕನ್ನಡವನ್ನು ಮೊದಲಿನಿಂದ ಹೇಳಿಕೊಡಲು ಶುರುಮಾಡಿ ವರ್ಣಮಾಲೆ ಬರೆಸಿ. ವರ್ಣಮಾಲೆ ಬಂದ ನಂತರ ಕಾಗುಣಿತ ಬಳಸದೆ ವರ್ಣಮಾಲೆಯಿಂದಲೆ ರಚಿಸಬಹುದಾದ ಕೆಲವು ಪದಗಳನ್ನು ಪರಿಚಯಿಸಿ. ಉದಾ;- ಅರಸ, ಆಲದಮರ, ಇಂಚರ, ಈಶ, ಉಡ, ಊಟ ಇತ್ಯಾದಿ. ನಂತರ ಒತ್ತಕ್ಷರ ಹಾಗು ಒತ್ತಕ್ಷರದ ಪದಗಳು. ಇವು ಸಹ ಸರಳವಾಗಿರಲಿ. ಅದಾದ ನಂತರ ಕಾಗುಣಿತ ಹೇಳಿ ಕೊಡಿ. ಇದಕ್ಕೆ ಪ್ರತಿ ದಿನ ನೀವು ಅರ್ಧದಿಂದ ಒಂದು ಗಂಟೆ ಮೀಸಲಿಟ್ಟರೆ ಸಾಕು. ನಿಮ್ಮ ಮಗು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಇದನ್ನು ೨೧ ರಿಂದ ೩೦ ದಿನದಲ್ಲಿ ಕಲಿಯಬಹುದು.ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊ ಪ್ರಕಾರ ಮುಂದಿನ ೫೦ ವರ್ಷಗಳಲ್ಲಿ ವಿಶ್ವದ ಹಲವು ಭಾಷೆಗಳು ಮಾತನಾಡುವವರಿಲ್ಲದೆ ಸತ್ತು ಹೋಗುತ್ತವೆಯಂತೆ. ಆ ಪಟ್ಟಿಯಲ್ಲಿ ಕನ್ನಡವೂ ಸೇರಿದೆ. ಮೇಲಿನ ಸಲಹೆಗಳನ್ನು ಜಾರಿಗೆ ತನ್ನಿ ಕನ್ನಡವನ್ನು ಉಳಿಸಿ. ನಾಚಿಕೆ, ಅಸಡ್ಡೆ ಬಿಟ್ಟು ನಿಮ್ಮ ಮಕ್ಕಳಿಗೆ ಕನ್ನಡ ಪದಗಳ ಬಗ್ಗೆ, ಕನ್ನಡದ ಹಾಡುಗಳ ಬಗ್ಗೆ, ಕನ್ನಡ ಪದ್ಯಗಳ ಬಗ್ಗೆ ಹೇಳಿಕೊಡಿ. ಕೆಂಪು, ನೀಲಿ, ಹಳದಿ, ಬಿಳಿ, ಕಪ್ಪು ಬಣ್ಣಗಳನ್ನು, ಆನೆ, ಹುಲಿ, ಒಂಟೆ, ಕತ್ತೆ, ಕುದುರೆ, ಬೆಕ್ಕು ಮುಂತಾದ ಪ್ರಾಣಿಗಳ ಹೆಸರುಗಳನ್ನು ಕನ್ನಡದಲ್ಲಿಯೇ ಹೇಳಿಕೊಡಿ. ಕನ್ನಡ ಯಾಕೆ ಉದ್ಧಾರ ಆಗಲ್ಲ?

Wednesday, 19 September 2012

ಶಿಕ್ಷಣವಿಲ್ಲಿ ಬೀದಿ ವ್ಯಾಪಾರ

ತಮಿಳುನಾಡಿನಲ್ಲಿ ಯಾರು ಬೇಕಾದರೂ ಶಾಲೆ ತೆರೆಯಬಹುದು, ಒಬ್ಬ ’ಬಡಗಿ’ ಕೂಡ ಯಾವುದೇ ಅಧಿಕೃತ ಪರವಾನಗಿ ಇಲ್ಲದೆಯೇ ಶಾಲೆ ತೆರೆಯಬಹುದು" ಎಂದು ತಮಿಳುನಾಡು ಪ್ರೌಢಶಾಲೆಗಳ ನಿರ್ದೇಶಕರಾದ ಕೆ. ದೇವರಾಜನ್ ಹೇಳಿರುವುದಾಗಿ ವರದಿಯಾಗಿದೆ. ಬಹುಶಃ ಇದು ಬಾಯಿ ತಪ್ಪಿ ಬಂದ ಮಾತಾಗಿರಬಹುದು. ಆದರೆ ಮಾಧ್ಯಮಗಳು ಈ ಒಂದು ಎಡವಟ್ಟು ಮಾತನ್ನೇ ಎತ್ತಿಕೊಂಡು ದೊಡ್ಡದು ಮಾಡಬಹುದೆಂದು ಅವರು ಅಂದುಕೊಂಡಿರಲಿಕ್ಕಿಲ್ಲ. ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಈಚೆಗೆ ಚೆನ್ನೈಯಲ್ಲಿ ಏರ್ಪಡಿಸಿದ್ದ ‘ಪಬ್ಲಿಕ್ ಹಿಯರಿಂಗ್’ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು. "ತಮಿಳುನಾಡಿನಲ್ಲಿ ಶಾಲಾ ಶಿಕ್ಷಣದ ವಿಚಾರದಲ್ಲಿ ದೇವರಾಜನ್ ಹೇಳಿರುವ ಮಾತು ಪೂರ್ತಿ ಸತ್ಯ. ಒಂದಿಷ್ಟು ಭೂಮಿ, ಕೆಲವು ಕುರ್ಚಿಗಳು ಹಾಗೂ ಒಂದಷ್ಟು ಹಣ ಇಟ್ಟುಕೊಂಡಿರುವ ಯಾರು ಬೇಕಾದರೂ ಇಲ್ಲಿ ಹೈಸ್ಕೂಲನ್ನು ಆರಂಭಿಸಬಹುದು. ಸರ್ಕಾರದ ಅಂಗೀಕಾರ ಪಡೆಯುವುದೆನ್ನುವುದು ಕೇವಲ ಔಪಚಾರಿಕವಾದುದು ಹಾಗೂ ಅದಕ್ಕೆ ಒಂದಷ್ಟು ಸಮಯ ಹಿಡಿಸುತ್ತದೆ ಅಷ್ಟೇ. ತಮಿಳುನಾಡಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಭಾರೀ ಬೇಡಿಕೆಯಿದೆ. ರಾಜ್ಯದಲ್ಲಿ ಇಂದು ೪೦೦೦ಕ್ಕೂ ಹೆಚ್ಚು ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ ಸುಮಾರು ೧೦೦೦ ಶಾಲೆಗಳು ಅನೇಕ ವರ್ಷಗಳಿಂದ ಮಾನ್ಯತೆಗಾಗಿ ಕಾಯುತ್ತಿವೆ; ಆದರೂ ನಿಂತಿಲ್ಲ, ನಡೆಯುತ್ತಿವೆ. ಅವುಗಳ ಬಗ್ಗೆ ಯಾವುದೇ ಮೇಲ್ವಿಚಾರಣೆ ಇಲ್ಲದಿರುವುದರಿಂದ ಅವುಗಳ ಗುಣಮಟ್ಟ ತೀರಾ ಶೋಚನೀಯವಾಗಿದೆ" ಎನ್ನುತ್ತಾರೆ ’ಸ್ಟೇಟ್ ಪ್ಲಾಟ್ಫಾರ್ಮ್ ಫಾರ್ ಕಾಮನ್ ಸ್ಕೂಲ್ ಸಿಸ್ಟಂ’ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಿನ್ಸ್ ಗಜೇಂದ್ರ ಬಾಬು.ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಕುಂಭಕೋಣಂನಲ್ಲಿ ಇಂತಹ ಶಾಲೆಯೊಂದರಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ೯೬ ಚಿಕ್ಕ ಮಕ್ಕಳು ಅಸುನೀಗಿದ್ದು ತಮಿಳುನಾಡಿನ ಖಾಸಗಿ ಶಾಲೆಗಳ ದುಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕುಂಭಕೋಣದ ದುರ್ಘಟನೆಯಿಂದಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತಂತೆ ಕಂಡ ರಾಜ್ಯ ಸರ್ಕಾರ ಸಮರ್ಪಕ ಮೂಲಸೌಕರ್ಯಗಳಿಲ್ಲದೇ ತಲೆಯೆತ್ತುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ಮುಂದಾದಂತೆ ಕಂಡಿತು. ಹಾಗೆ ಕಂಡಿದ್ದಷ್ಟೆ ಹೊರತು ಅಂತಹ ಶಾಲೆಗಳು ತಲೆಯೆತ್ತುವುದನ್ನು ತಡೆಯುವುದಕ್ಕೇನೂ ಅದರಿಂದ ಸಾಧ್ಯವಾಗಲಿಲ್ಲ. ಮದರಾಸು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳಾದ ಹಿರಿಯ ಶಿಕ್ಷಣ ತಜ್ಞೆ ಡಾ. ವಾಸಂತಿ ದೇವಿಯವರು ತಮಿಳುನಾಡಿನ ಶೇ. ೭೫ರಷ್ಟು ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಲು ಅಯೋಗ್ಯವಾಗಿವೆ ಎನ್ನುತ್ತಾರೆ. "ಶಿಕ್ಷಣದ ಹಕ್ಕಿನ ಕಾಯ್ದೆಯಲ್ಲಿ ನೀಡಲಾಗಿರುವ ಮಾರ್ಗಸೂಚಿಗಳಂತೆ ಎಲ್ಲಾ ಶಾಲೆಗಳ ಬೋಧಕ ಸಿಬ್ಬಂದಿಯ ಶೈಕ್ಷಣಿಕ ಗುಣಮಟ್ಟ ಹಾಗೂ ಶಾಲೆಗಳ ಮೂಲಸೌಕರ್ಯಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದ್ದೇ ಆದಲ್ಲಿ ರಾಜ್ಯದ ಶೇ. ೭೫ರಷ್ಟು ಶಾಲೆಗಳು ಮುಚ್ಚಲು ಯೋಗ್ಯವಾಗಿವೆ. ಇಲ್ಲಿನ ಅನೇಕ ಖಾಸಗಿ ಶಾಲೆಗಳು ಗೂಡಂಗಡಿಗಳಂತಿವೆ. ಅವುಗಳಲ್ಲಿ ಆಟದ ಮೈದಾನಗಳು ಕೂಡ ಇಲ್ಲ. ಪ್ರತಿಯೊಂದು ಹಳ್ಳಿಯಲ್ಲೂ ಖಾಸಗಿ ಶಾಲೆಗಳನ್ನು ಮನಸೋ ಇಚ್ಛೆ ತೆರೆಯಲಾಗಿದೆ. ಅವು ಮಾನ್ಯತೆಗಾಗಿ ಕೋರಿಕೆ ಸಲ್ಲಿಸಿದರೆ ಮಾತ್ರ ಸರ್ಕಾರ ಕೊಡುತ್ತದೆ. ಇಲ್ಲದಿದ್ದರೆ ಅವು ಮಾನ್ಯತೆಯಿಲ್ಲದೆಯೇ ಎಷ್ಟು ಕಾಲ ಬೇಕಾದರೂ ಕಾರ್ಯ ನಿರ್ವಹಿಸಬಹುದು. ಅವುಗಳಲ್ಲಿನ ಮೂಲಸೌಕರ್ಯಗಳು ಎಷ್ಟು ಕಳಪೆ ದರ್ಜೆಯಲ್ಲಿವೆಯೆಂದರೆ, ಕುಂಭಕೋಣಂನಲ್ಲಿ ನಡೆದಂತಹ ದುರಂತ ಭವಿಷ್ಯದಲ್ಲಿ ಮತ್ತೆ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲವೆಂದೇ ನನಗೆ ತೋರುತ್ತದೆ" ಎಂದು ಡಾ. ವಾಸಂತಿ ದೇವಿ ದುಃಖ ವ್ಯಕ್ತಪಡಿಸುತ್ತಾರೆ.ಈಚೆಗೆ ಖಾಸಗಿ ಶಾಲೆಯೊಂದರ ಶಾಲಾ ವಾಹನ ಕೆರೆಯೊಂದಕ್ಕೆ ಬಿದ್ದು ಒಂಬತ್ತು ಹಸುಳೆಗಳು ಮರಣ ಹೊಂದಿದ ಪ್ರಕರಣ ಮೇಲೆ ಹೇಳಿದ ಪಬ್ಲಿಕ್ ಹಿಯರಿಂಗ್ನಲ್ಲಿ ಉಲ್ಲೇಖಗೊಂಡಿತು. ಆ ಶಾಲೆಯೀಗ ಹೆಸರು ಬದಲಾಯಿಸಿಕೊಂಡು ಪುನಃ ಕಾರ್ಯ ನಿರ್ವಹಿಸುತ್ತಿದೆ, ಅದೂ ಸರ್ಕಾರಿ ಮಾನ್ಯತೆಯಿಲ್ಲದೆಯೇ.ದೇವರಾಜನ್ ಅವರನ್ನು ಟಿಎಸ್‌ಐ ಭೇಟಿ ಮಾಡಿ ಅವರ ಹೇಳಿಕೆಯ ಬಗ್ಗೆ ವಿವರಣೆ ಕೇಳಿದಾಗ, ಮಾಧ್ಯಮಗಳು ತಮ್ಮ ಮಾತನ್ನು ಅಪಾರ್ಥ ಮಾಡಿಕೊಂಡಿವೆ ಎಂದರು. "ಅಸ್ತಿತ್ವದಲ್ಲಿರುವ ಕಾಯ್ದೆಯಂತೆ ಯಾರೇ ಆಗಲಿ ಅಗತ್ಯವಿರುವ ಭೂಮಿ, ಮೂಲಸೌಕರ್ಯಗಳು ಹಾಗೂ ಶಿಕ್ಷಣ ಇಲಾಖೆಯ ಪರವಾನಗಿಗಳಿದ್ದರೇನೇ ಶಾಲೆಯೊಂದನ್ನು ಆರಂಭಿಸಲು ಸಾಧ್ಯ. ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಮಾತ್ರ ಇದರಿಂದ ವಿನಾಯ್ತಿ ನೀಡಲಾಗಿದೆ. ಆದರೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ತಮಿಳುನಾಡಿನಂತಹ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಅತಿಯಾದ ಬೇಡಿಕೆಯಿದೆ. ಖಾಸಗಿ ಶಿಕ್ಷಣ ಸಂಸ್ಥೆಯೊಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೆ ಸಹಜವಾಗಿಯೇ ಹೆಚ್ಚುಹೆಚ್ಚು ಮಕ್ಕಳು ಅಲ್ಲಿಗೆ ಸೇರುತ್ತಾರೆ. ಶಾಲೆ ತೆರೆದವರು ಆ ಬಳಿಕ ಮಾನ್ಯತೆ ಕೇಳಿ ನಮ್ಮ ಬಳಿಗೆ ಬಂದಾಗ, ಸಮಗ್ರವಾದ ಪ್ರತ್ಯಕ್ಷ ಪರಿಶೀಲನೆಯ ನಂತರವೇ ಮಾನ್ಯತೆ ನೀಡಲಾಗುತ್ತಿದೆ" ಎಂದು ಅವರು ಹೇಳುತ್ತಾರೆ. ಎನ್ಸಿಪಿಸಿಆರ್ನ ಪಬ್ಲಿಕ್ ಹಿಯರಿಂಗ್ನಲ್ಲಿ ತಮಿಳುನಾಡಿನ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಯ ಕುರಿತು ತೀವ್ರವಾದ ಟೀಕೆ ವ್ಯಕ್ತವಾಗಿತ್ತು.ತಮಿಳುನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಶಿಕ್ಷಣ ಒಂದು ವಿವಾದಗ್ರಸ್ತ ವಿಚಾರವಾಗಿದೆ. ಸಮಾನ ಶಿಕ್ಷಣ ಕಾಯ್ದೆ ಹಾಗೂ ಖಾಸಗಿ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದ ನಿಯಮಗಳು ಬಹುಮುಖ್ಯ ವಿಚಾರಗಳಾಗಿವೆ. ಸಮಾನ ಶಿಕ್ಷಣ ಕಾಯ್ದೆಯನ್ವಯ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ವಿಭಿನ್ನ ಜ್ಞಾನ ಶಿಸ್ತುಗಳನ್ನು ಬೋಧಿಸುವ ಎಲ್ಲಾ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ಪಠ್ಯಕ್ರಮವನ್ನು ರೂಪಿಸಿತು. ಆದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ದೀರ್ಘಕಾಲದ ಕಾನೂನು ಸಮರದ ಬಳಿಕ ಇದೀಗ ಈ ವಿಚಾರ ಬಗೆಹರಿದಿದೆ.ಆದರೆ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದ ವಿಚಾರ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ನಿವೃತ್ತ ನ್ಯಾಯಾಧೀಶ ಗೋವಿಂದರಾಜನ್ ಅಧ್ಯಕ್ಷತೆಯಲ್ಲಿ ಇದಕ್ಕಾಗಿ ಆಯೋಗವೊಂದನ್ನು ರಚಿಸಲಾಗಿತ್ತು. ಅವರು ಮೊದಲಿಗೆ ಪ್ರೌಢಶಾಲೆಗಳ ಶುಲ್ಕವನ್ನು ನಿರ್ಧರಿಸಿ ವರದಿ ನೀಡಿದರು. ಅದರ ವಿರುದ್ಧ ಪ್ರೌಢಶಾಲೆಗಳ ಅಸೋಸಿಯೇಶನ್ನು ಕೋರ್ಟಿಗೆ ಹೋಗಿದೆ. ಇತ್ತ ಆ ನ್ಯಾಯಾಧೀಶರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದಾರೆ. ಈಗ ಮತ್ತೊಬ್ಬ ನಿವೃತ್ತ ನ್ಯಾಯಾಧೀಶ ರವಿರಾಜ ಪಾಂಡ್ಯನ್ ಅವರಿಗೆ ಆಯೋಗದ ಅಧ್ಯಕ್ಷತೆ ವಹಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಚಟುವಟಿಕೆ-ಆಧಾರಿತ ಕಲಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಶಹಭಾಸ್ಗಿರಿ ಗಳಿಸಿದೆ. ಆದರೆ ಇತರ ಹಲವು ವಿಚಾರಗಳಲ್ಲಿ ಸಾಧಿಸಬೇಕಾದ್ದು ಬಹಳವಿದೆ. ಬಹುಶಃ ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯೊಳಗೆ ಸೇರಿಕೊಂಡಿರುವ ಅಸಂಗತಗಳನ್ನು ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಇಂತಹ ಅನೇಕ ಪಬ್ಲಿಕ್ ಹಿಯರಿಂಗ್ಗಳು ಬೇಕೇನೋ?